ಸಂಘದ ಸನ್ಮಾನ ಮ್ಯಾಗ್ಸೆಸ್ಸೆಗಿಂತ ಹೆಚ್ಚು: ನಾ. ಮೊಗಸಾಲೆ
ಧಾರವಾಡ: ಕನ್ನಡ ಗುಡಿ ವಿದ್ಯಾವರ್ಧಕ ಸಂಘದ ಸನ್ಮಾನ ನನಗೆ ಮ್ಯಾಗ್ಸೆಸ್ಸೆ ಪ್ರಶಸ್ತಿಗಿಂತ ದೊಡ್ಡ ಗೌರವ ಎಂದು ಸಾಹಿತಿ ನಾ. ಮೊಗಸಾಲೆ ಹೇಳಿದರು.
ರಾಜ್ಯೋತ್ಸವ ಅಂಗವಾಗಿ ಶನಿವಾರ ಧಾರವಾಡದಲ್ಲಿ ಏರ್ಪಡಿಸಿದ್ದ 'ಕನ್ನಡ ಹಬ್ಬ' ಕಾರ್ಯಕ್ರಮದಲ್ಲಿ ವಿದ್ಯಾವರ್ಧಕ ಸಂಘದ ಅಭಿನಂದನೆ ಸ್ವೀಕರಿಸಿ ಮಾತನಾಡಿದ ಅವರು, ಸಾಹಿತಿ ಸಿದ್ದಲಿಂಗ ಪಟ್ಟಣಶೆಟ್ಟಿ ತಮ್ಮ ಭಾಷಣದಲ್ಲಿ ಹೇಳಿರುವಂತೆ ತಮಗೆ ಮ್ಯಾಗ್ಸೆಸ್ಸೆ ಪ್ರಶಸ್ತಿ ಒಲಿದು ಬಂದರೆ, ಈ ಹಣವನ್ನು ಕಾಂತಾವರದಲ್ಲಿರುವ ಅಲ್ಲಮಪ್ರಭು ಪೀಠಕ್ಕೆ ವಿನಿಯೋಗಿಸಲಾಗುವುದು ಎಂದರು.
ಕಾಂತಾವರದಲ್ಲಿ ಸ್ಥಾಪನೆಯಾದ ಕನ್ನಡ ಸಂಘವು ವೃಕ್ಷವಾಗಿ ಬೆಳೆಯಬೇಕಿದೆ. ಈ ಹಿನ್ನೆಲೆಯಲ್ಲಿ ಈಗ ರು. 28 ಕೋಟಿ ವೆಚ್ಚದ ಹತ್ತಾರು ಅಭಿವೃದ್ಧಿ ಯೋಜನೆಗಳನ್ನು ಹಾಕಿಕೊಂಡಿದ್ದೇನೆ. ಹಣಕಾಸಿನ ನೆರವು ಸಿಕ್ಕರೆ ಯೋಜನೆಗಳು ಶೀಘ್ರ ಕಾರ್ಯರೂಪಕ್ಕೆ ಬರುತ್ತವೆ ಎಂದರು.
ಅಧ್ಯಕ್ಷತೆ ವಹಿಸಿದ್ದ ನಾಡೋಜ ಚೆನ್ನವೀರ ಕಣವಿ, 'ಸಿರಿಗನ್ನಡಂ ಗೆಲ್ಗೆ' ಪದ ಮೊದಲು ಬಳಸಿದವರು ಬಿ.ಎಂ. ಶ್ರೀಕಂಠಯ್ಯ ಎಂದು ಬಹಳ ಜನರು ತಿಳಿದುಕೊಂಡಿದ್ದಾರೆ. ಈ ಪದ ಮೊದಲು ಬಳಸಿದವರು ವಿದ್ಯಾವರ್ಧಕ ಸಂಘದ ಸ್ಥಾಪಕ ರಾ.ಹ. ದೇಶಪಾಂಡೆ. ಬಿಎಂಶ್ರೀಗೆ ರಾ.ಹ. ದೇಶಪಾಂಡೆ ಪತ್ರ ಬರೆಯುವಾಗ 'ಸಿರಿಗನ್ನಡಂ ಗೆಲ್ಗೆ' ಎಂದು ಬರೆದು ಮುಂದಿನ ಸಮಾಚಾರ ಬರೆಯುತ್ತಿದ್ದರು. ಆ ಪದ ಗಮನಿಸಿ ಬಿಎಂಶ್ರೀ ಎಲ್ಲೆಡೆ ಬಳಸಲು ಪ್ರಾರಂಭಿಸಿದರು ಎಂದು ತಿಳಿಸಿದರು.
ವಿದ್ಯಾವರ್ಧಕ ಸಂಘದ ಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿ, ಪಂಚಾಕ್ಷರಿ ಹಿರೇಮಠ, ಮೋಹನ ನಾಗಮ್ಮನವರ, ಡಾ. ಜಿ.ಎಂ. ಹೆಗಡೆ, ಗಿರಡ್ಡಿ ಗೋವಿಂದರಾಜ ಮತ್ತಿತರರು ಇದ್ದರು.