ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಉಡುಪಿ

ಲಂಚ ತಿಂದು 'ಜೈಲು' ಪಾಲಾದ ವಾರ್ಡನ್!

Vishwanath S
Updated On : 19 Nov 2013, 1:44 am

ಉಡುಪಿ: ಜೈಲು ಕಾಯುವ ಜೈಲು ವಾರ್ಡನ್ ಜೈಲು ಪಾಲಾಗಿದ್ದಾನೆ!
ಉಡುಪಿ ಜಿಲ್ಲಾ ಕಾರಾಗೃಹದಲ್ಲಿ ಅನಾರೋಗ್ಯಪೀಡಿತರಾಗಿದ್ದ ವಿಚಾರಣಾಧೀನ ಕೈದಿಯನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲು 5 ಸಾವಿರ ಲಂಚ ಕೇಳಿದ್ದ ಜೈಲ್ ವಾರ್ಡನ್ ಸುರೇಶ್ ಬಾಬುಗೆ 3 ವರ್ಷ ಜೈಲುವಾಸ, 4 ಸಾವಿರ ದಂಡ ವಿಧಿಸಲಾಗಿದೆ.
ಪ್ರಕರಣ ಹಿನ್ನೆಲೆ: 2011ರ ಮಾರ್ಚ್‌ನಲ್ಲಿ ಕುಂದಾಪುರ ತಾಲೂಕಿನ ಮರವಂತೆಯ ನಿವಾಸಿ ನವೀನ್ ಚೆನ್ನಯ್ಯ ಎಂಬವರ ಲಾರಿಯಲ್ಲಿ ಕೆಲಸ ಮಾಡಿಕೊಂಡಿದ್ದ ಸಂತೋಷ್ ಕ್ರಿಮಿನಲ್ ಪ್ರಕರಣವೊಂದರಲ್ಲಿ ಜಿಲ್ಲಾ ಕಾರಾಗೃಹದ ನ್ಯಾಯಾಂಗ ಬಂಧನದಲ್ಲಿದ್ದರು. ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲು ಉಡುಪಿ ಜಿಲ್ಲಾ ಕಾರಾಗೃಹದ ಜೈಲ್ ವಾರ್ಡನ್ ಸುರೇಶ್ ಬಾಬು 5 ಸಾವಿರ ಲಂಚಕ್ಕೆ ಬೇಡಿಕೆ ಸಲ್ಲಿಸಿದ್ದರು.
 ಈ ಬಗ್ಗೆ ನವೀನ್ ಚೆನ್ನಯ್ಯ ಉಡುಪಿಯ ಲೋಕಾಯುಕ್ತ ಠಾಣೆಗೆ ದೂರು ನೀಡಿದ್ದರು. ಈ ದೂರಿನಂತೆ ಆಗಿನ ಲೋಕಾಯುಕ್ತ ಪೊಲೀಸ್ ನಿರೀಕ್ಷಕ ಸಿ.ಇ. ತಿಮ್ಮಯ್ಯ ಅವರು ಸುರೇಶ್ ಬಾಬು ಹಣ ಸ್ವೀಕರಿಸುವ ಸಂದರ್ಭದಲ್ಲಿ ಟ್ರ್ಯಾಪ್ ಮಾಡಿ ದಸ್ತಗಿರಿ ಮಾಡಿದ್ದರು. ನಂತರ ಡಿಸೆಂಬರ್‌ನಲ್ಲಿ ಜಿಲ್ಲಾ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿಯನ್ನೂ ಸಲ್ಲಿಸಲಾಗಿತ್ತು. ನಂತರ ಪ್ರಕರಣ ವಿಚಾರಣೆಗೊಳಪಟ್ಟಿತ್ತು. ಲೋಕಾಯುಕ್ತ ವಿಶೇಷ ಸರ್ಕಾರಿ ಅಭಿಯೋಜಕ ಭಾಸ್ಕರ ಹೆಗ್ಡೆ ಸರ್ಕಾರದ ಪರವಾಗಿ ವಾದಿಸಿದ್ದರು.
 ಪ್ರಕರಣ ಸಾಬೀತಾಗಿ ನ.16ರಂದು ಜಿಲ್ಲಾ ಮತ್ತು ಸತ್ರ ನ್ಯಾಯಾಲದ ನ್ಯಾಯಾಧೀಶ ಬಿ.ಎಂ. ಅಂಗಡಿ ಜೈಲರ್ ಸುರೇಶ್‌ಬಾಬುಗೆ 3 ವರ್ಷ ಜೈಲು ಶಿಕ್ಷೆ ಹಾಗೂ 4 ಸಾವಿರ ದಂಡ ವಿಧಿಸಿದ್ದಾರೆ. ದಂಡ ತೆರಲು ತಪ್ಪಿದಲ್ಲಿ 4 ತಿಂಗಳು ಹೆಚ್ಚುವರಿ ಜೈಲು ಶಿಕ್ಷೆ ವಿಧಿಸುವಂತೆ ತೀರ್ಪಿನಲ್ಲಿ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement