ಹುಲ್ಲು ಪೊದೆಯ ನಡುವೆ ಎಟಿಎಂ!
ಉಡುಪಿ: ದಯವಿಟ್ಟು ನಂಬಿ, ಚಿತ್ರದಲ್ಲಿ ಕಾಣುತ್ತಿರುವುದು ಪ್ರಸಿದ್ಧ ರಾಷ್ಟ್ರೀಕೃತ ಬ್ಯಾಂಕ್ವೊಂದರ ಎಟಿಎಂ ಕೇಂದ್ರ!
ಇದು ನಗರದ ಹೊರಭಾಗದ ಯಾವುದೋ ನಿರ್ಜನ ಕಾಡಿನ ಪ್ರದೇಶದಲ್ಲಿಲ್ಲ, ಉಡುಪಿ ನಗರದ ಅಂಬಾಗಿಲು ವಾರ್ಡ್ನ ರಾಷ್ಟ್ರೀಯ ಹೆದ್ದಾರಿ 66ರ ಪಕ್ಕದಲ್ಲಿಯೇ ಇದೆ. ಈ ಎಟಿಎಂ ಕೇಂದ್ರದ ಸುತ್ತ ಆಳೆತ್ತರದ ಹುಲ್ಲು, ಗಿಡ ಗಂಟಿಗಳು ಬೆಳೆದಿವೆ, ಅವುಗಳ ಮಧ್ಯೆ ಎಂಟಿಎಂ ಕೇಂದ್ರಕ್ಕೆ ಹೋಗುವುದಕ್ಕೆ ದಾರಿ ಎಲ್ಲಿದೆ ಎಂದು ಹುಡುಕಬೇಕಾದ ದಯನೀಯ ಪರಿಸ್ಥಿತಿ ಇಲ್ಲಿದೆ.
ಚರಂಡಿ ಹಾರಬೇಕು!: ವಯಸ್ಸಾದವರಂತೂ ಈ ಎಂಟಿಎಂ ಕೇಂದ್ರಕ್ಕೆ ಹೋಗಬೇಕಾದರೆ ಸಾಹಸವನ್ನೇ ಮಾಡಬೇಕು. ಯಾಕೆಂದರೆ, ಹೆದ್ದಾರಿ ಅಗಲಗೊಳಿಸುವುದಕ್ಕಾಗಿ ಎಟಿಎಂ ಕೇಂದ್ರದ ಮುಂಭಾಗದಲ್ಲಿಯೇ ಸೊಂಟದಷ್ಟು ಆಳದ ಚರಂಡಿ ತೋಡಿದ್ದಾರೆ. ಯುವಕರಿಗೂ ಹಾರಿ ಈ ಚರಂಡಿಯನ್ನು ದಾಟುವುದಕ್ಕೆ ಕಷ್ಟ, ಹಾಗಿರುವಾಗ ವಯಸ್ಸಾದವರು ಈ ಚರಂಡಿಯಲ್ಲಿ ಇಳಿದು ಆಚೆ ಕಡೆ ಹತ್ತಬೇಕು.
ಕಾವಲುಗಾರನಿಲ್ಲ: ಹೋಗಲಿ, ಈ ಎಟಿಎಂ ಕೇಂದ್ರಕ್ಕೆ ಬರುವವರಿಗೆ ಸಹಾಯ ಮಾಡುವುದಕ್ಕಾದರೂ ಕಾವಲುಗಾರನಿದ್ದಾನೆಯೇ ಎಂದರೆ ಅದೂ ಇಲ್ಲ. ಎಂಟಿಎಂ ಕೇಂದ್ರದೊಳಗೆ ಸಿಸಿ ಕ್ಯಾಮರಾ ಏನೋ ಇದೆ, ಆದರೆ ಅದೂ ಕೆಲಸ ಮಾಡುತ್ತಿದೆ ಎನ್ನುವ ಖಾತರಿ ಇಲ್ಲ.
ಬೆಂಗಳೂರಿನ ಎಟಿಎಂ ಕೇಂದ್ರದಲ್ಲಿ ಮಹಿಳೆಯ ಮೇಲೆ ನಡೆದ ಮಾರಣಾಂತಿಕ ಹಲ್ಲೆಯಂತಹ ಘಟನೆ ನಡೆಯುವುದಕ್ಕೆ ಅಂಬಾಗಿಲಿನ ಈ ಎಟಿಎಂ ಅತ್ಯಂತ ಪ್ರಶಸ್ತವಾಗಿದೆ ಎಂಬುದನ್ನು ಅತ್ಯಂತ ಆತಂಕದಿಂದಲೇ ಹೇಳಬೇಕಾಗಿದೆ.
'ಕನ್ನಡಪ್ರಭ'ದ ರಿಯಾಲಿಟಿ ಚೆಕ್: ಉಡುಪಿ ನಗರದಲ್ಲಿ ವಿವಿಧ ರಾಷ್ಟ್ರೀಕೃತ ಮತ್ತು ಖಾಸಗಿ ಬ್ಯಾಂಕ್ಗಳ ಸುಮಾರು 30 ಮತ್ತು ಉಡುಪಿ ನಗರದ ಹೊರಭಾಗಗಳಲ್ಲಿ ಸುಮಾರು 10 ಎಟಿಎಂ ಕೇಂದ್ರಗಳಿವೆ. ಒಂದು ಕಿ.ಮೀ. ಉದ್ದಗಲದ ಮಣಿಪಾಲ ನಗರದಲ್ಲಿ 15 ಎಟಿಎಂ ಕೇಂದ್ರಗಳಿವೆ. ಈ ಬಗ್ಗೆ ಕೆಲವು ಬ್ಯಾಂಕ್ಗಳಲ್ಲಿ ವಿಚಾರಿಸಿದಾಗ, 'ಕಾವಲುಗಾರರಿದ್ದಾರೆ, ಸಿಸಿ ಕ್ಯಾಮರಾಗಳಿವೆ, ಭದ್ರತೆಯ ಎಲ್ಲ ವ್ಯವಸ್ಥೆಗಳನ್ನು ಮಾಡಿದ್ದೇವೆ' ಎಂದರು.
ಆದರೆ 'ರಿಯಾಲಿಟಿ ಚೆಕ್' ಮಾಡಲು 'ಕನ್ನಡಪ್ರಭ' ಒಂದು ಸುತ್ತು ಹೊಡೆದಾಗ, ಉಡುಪಿ ನಗರದಲ್ಲಿಯೇ ಇರುವ 15ಕ್ಕೂ ಹೆಚ್ಚು ಎಟಿಎಂ ಕೇಂದ್ರಗಳಲ್ಲಿ ಕಾವಲುಗಾರರು ಇರಲಿಲ್ಲ. ಅಜ್ಜರಕಾಡು, ಅಂಬಾಗಿಲು, ಕಡಿಯಾಳಿ, ರಾಜ್ ಟವರ್, ಸಿಪಿಎಂ ಪ್ಲಾಝಾ, ರಥಬೀದಿಯಲ್ಲಿರುವ 3 ಎಂಟಿಎಂ ಕೇಂದ್ರಗಳಲ್ಲಿ ಕಾವಲುಗಾರರಿರಲಿಲ್ಲ.
ಇನ್ನು ಉಡುಪಿ- ಮಣಿಪಾಲ ರಾಜ್ಯ ಹೆದ್ದಾರಿಯ ಎಟಿಎಂ ಕೇಂದ್ರಕ್ಕೆ ಹೆಸರಿಗೆ ಬಾಗಿಲು ಇದೆ, ಆದರೆ ಉಪಯೋಗಕ್ಕಿಲ್ಲ, ಅಂದರೆ ಮುಚ್ಚುವುದಕ್ಕಾಗುವುದಿಲ್ಲ!
ಬಹುತೇಕ ಬ್ಯಾಂಕ್ ಶಾಖೆಗಳಿಗೆ ಹೊಂದಿಕೊಂಡಿರುವ ಎಟಿಎಂ ಕೇಂದ್ರಗಳಿಗೆ ಪ್ರತ್ಯೇಕ ಕಾವಲುಗಾರನಿರುವುದಿಲ್ಲ, ಬ್ಯಾಂಕ್ ಕಾವಲುಗಾರರೇ ಎಟಿಎಂ ಕೇಂದ್ರದಲ್ಲಿಯೂ ಕಾರ್ಯ ನಿರ್ವಹಿಸುತ್ತಿದ್ದಾರೆ. ಅದರಲ್ಲೂ ರಾತ್ರಿ ಹೊತ್ತಿನಲ್ಲಿ ಈ ಕಾವಲುಗಾರರು ಹಾಯಾಗಿ ನಿದ್ರೆ ಮಾಡುತ್ತಿರುತ್ತಾರೆ.
ಬೇಕಾದಷ್ಟು ಹಣವೂ ಇರುವುದಿಲ್ಲ: ಸುರಕ್ಷತೆಯ ಜೊತೆಗೆ ಇನ್ನೊಂದು ಸಮಸ್ಯೆ ಉಡುಪಿಯ ಎಟಿಎಂ ಕೇಂದ್ರಗಳಲ್ಲಿದೆ. ಉಡುಪಿಯ ಬಹುತೇಕ ಎಟಿಎಂ ಕೇಂದ್ರಗಳಿಗೆ ಸಾಕಷ್ಟು ಗ್ರಾಹಕರಿದ್ದಾರೆ. ಆದ್ದರಿಂದ ಬ್ಯಾಂಕ್ಗಳು ಬೆಳಗ್ಗೆ ಒಂದು ಬಾರಿ ಎಂಟಿಎಂ ಕೇಂದ್ರಗಳಿಗೆ ಹಣ ತುಂಬಿಸುತ್ತಾರೆ, ಸಂಜೆಯೊಳಗೆ ಆ ಹಣ ಖಾಲಿಯಾಗುತ್ತದೆ. ಆದ್ದರಿಂದ ಅನೇಕ ಬಾರಿ ಗ್ರಾಹಕರಿಗೆ ಹಣ ಸಿಗದೆ, ಬೇರೆ ಎಂಟಿಎಂ ಕೇಂದ್ರಗಳನ್ನು ಹುಡುಕಿಕೊಂಡು ಹೋಗಬೇಕಾದ ಅನಿವಾರ್ಯ ಪರಿಸ್ಥಿತಿ ಸಾಕಷ್ಟು ಎಟಿಎಂ ಕೇಂದ್ರಗಳಲ್ಲಿದೆ.
-ಸುಭಾಶ್ಚಂದ್ರ ಎಸ್. ವಾಗ್ಳೆ