5ರಂದು ನಿವೇಶನ ರಹಿತರಿಂದ ಅನಿರ್ದಿಷ್ಟಾವಧಿ ಧರಣಿ ಮುಷ್ಕರ
ಕುಂದಾಪುರ: ಕರ್ನಾಟಕ ಕೃಷಿ ಕೂಲಿಕಾರರ ಸಂಘದ ಕುಂದಾಪುರ ತಾಲೂಕು ಸಮಿತಿ ಮತ್ತು ತ್ರಾಸಿ ಗ್ರಾಪಂ ವ್ಯಾಪ್ತಿಯ ನಿವೇಶನ ರಹಿತರ ಹೋರಾಟ ಸಮಿತಿ ನೇತೃತ್ವದಲ್ಲಿ ನಿವೇಶನ ರಹಿತರಿಂದ ಸ್ವೀಕರಿಸಲಾದ ಒಟ್ಟು 564 ಅರ್ಜಿಗಳಿಗೆ ಕೂಡಲೇ ನಿವೇಶನ ಸ್ಥಳ ಗುರುತಿಸಿ ಹಕ್ಕು ಪತ್ರ ಮಂಜೂರು ಮಾಡುವಂತೆ ಒತ್ತಾಯಿಸಿ ಇತ್ತೀಚೆಗೆ ತ್ರಾಸಿಯ ಅಣ್ಣಪ್ಪಯ್ಯ ಸಭಾಭವನದಲ್ಲಿ ನಿವೇಶನ ರಹಿತ ಅರ್ಜಿದಾರರ ಬೃಹತ್ ಸಮಾವೇಶ ನಡೆಯಿತು.
ಕೂಲಿಕಾರರ ಸಂಘದ ತಾಲೂಕು ಅಧ್ಯಕ್ಷ ರಾಜೀವ ಪಡುಕೋಣಿ ಸಮಾವೇಶ ಉದ್ಘಾಟಿಸಿ, ತ್ರಾಸಿ ಗ್ರಾಪಂ ವ್ಯಾಪ್ತಿಯ ಬಡ ನಿವೇಶನ ರಹಿತರು ನಿವೇಶನ ಸ್ಥಳ ಕೋರಿ ಸಲ್ಲಿಸಿದ ಅರ್ಜಿಗಳು ಕುಂದಾಪುರ ತಾಪಂ ಮೂಲಕ ತಹಸೀಲ್ದಾರ್ ಕಚೇರಿಗೆ ಜು.18ರಂದು ಸಲ್ಲಿಸಲಾಗಿದ್ದರೂ, ಈ ತನಕ ನಿವೇಶನ ಹಂಚಿಕೆಗೆ ಮುಂದಿನ ಕ್ರಮ ಕೈಗೊಂಡಿಲ್ಲ.
ಇದು ಬಡವರ ಬಗ್ಗೆ ಅಧಿಕಾರಿಗಳ ಅಸಡ್ಡೆಯನ್ನು ತೋರಿಸುತ್ತಿದೆ. ಆದ್ದರಿಂದ ಅ.5ರಂದು ತಾಲೂಕಿನಾದ್ಯಂತ ನಿವೇಶನ ರಹಿತ ಅರ್ಜಿದಾರರನ್ನು ಸಂಘಟಿಸಿ ಕುಂದಾಪುರ ತಹಸೀಲ್ದಾರ್ ಕಚೇರಿ ಎದುರು ಭೂಮಿ ಹಕ್ಕಿಗಾಗಿ ಅನಿರ್ದಿಷ್ಟಾವಧಿ ಧರಣಿ ಮುಷ್ಕರ ಹಮ್ಮಿಕೊಳ್ಳಲಾಗಿದೆ. ತಾಲೂಕಿನ ನಿವೇಶನ ರಹಿತರೆಲ್ಲರೂ ಭಾಗವಹಿಸಬೇಕು ಎಂದರು. ತ್ರಾಸಿ ಗ್ರಾಪಂ ಮಾಜಿ ಅಧ್ಯಕ್ಷ ಹಾಗೂ ನಿವೇಶನ ರಹಿತರ ಹೋರಾಟ ಸಮಿತಿ ಸಂಚಾಲಕ ರೆನ್ಸವ್ ಪಿರೇರಾ ಸಮಾವೇಶದ ಅಧ್ಯಕ್ಷತೆ ವಹಿಸಿದ್ದರು.
ನಿವೇಶನ ರಹಿತರ ಹೋರಾಟ ಸಮಿತಿ ಸಂಚಾಲಕರಾದ ಕರಿಯ ದೇವಾಡಿಗ ಕೋಟೆಶ್ವರ, ಶ್ರೀನಿವಾಸ ಪೂಜಾರಿ ಗುಜ್ಜಾಡಿ, ಪ್ರಭಾಕರ ಮೊವ್ಹಾಡಿ, ನಾಗರತ್ನ ನಾಡ, ಸಂತೋಷ ಹೆಮ್ಮಾಡಿ, ಗ್ರಾಪಂ ಸದಸ್ಯೆ ಪ್ರೇಮಾ ಬಳೇಗಾರ ಉಪಸ್ಥಿತರಿದ್ದರು. ತಾಲೂಕು ಕಾರ್ಯದರ್ಶಿ ವೆಂಕಟೇಶ ಕೋಣಿ ನಿರೂಪಿಸಿದರು.