ಕೊಡವೂರು ಶಂಕರನಾರಾಯಣ ದೇವಳ ಜೀರ್ಣೋದ್ಧಾರ ಕಾಮಗಾರಿಗೆ ಚಾಲನೆ
ಉಡುಪಿ: ಇಲ್ಲಿನ ಕೊಡವೂರು ಶ್ರೀ ಶಂಕರನಾರಾಯಣ ದೇವಳ ಜೀರ್ಣೋದ್ಧಾರ ಕಾಮಗಾರಿಗೆ ಇತ್ತೀಚೆಗೆ ಚಾಲನೆ ದೊರಕಿತು.
ಕರಸೇವೆ ಮೂಲಕ ಊರಿನ ಸಮಸ್ತರು ಹಾಗೂ ಪಂಚರತ್ನ ಪ್ಯಾರಡೈಸ್ನ ಸಂತೋಷ್ ಶೆಟ್ಟಿ ನೇತೃತ್ವದಲ್ಲಿ ಮೂಡುಬೆಟ್ಟು ಬಂಟರ ಸಂಘದ ಸದಸ್ಯರು, ಮಧ್ವನಗರದ ವಿಶ್ವಬ್ರಾಹ್ಮಣ ಸೇವಾ ಸಮಿತಿ ಸದಸ್ಯರು ದೇವಳದ ಸಮಗ್ರ ಜೀರ್ಣೋದ್ಧಾರದ ಕಾಮಗಾರಿಗೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಆಡಳಿತ ಮೊಕ್ತೇಸರ ಟಿ. ರಾಘವೇಂದ್ರ ರಾವ್, ಸಹ ಮೊಕ್ತೇಸರರಾದ ರಾಘವೇಂದ್ರ ಭಟ್, ವಿಜಯ ಎಂ. ಬಂಗೇರ, ಸುರೇಶ್ ಶೆಟ್ಟಿ, ಭಕ್ತ ವೃಂದದ ಅಧ್ಯಕ್ಷ ರವಿರಾಜ್ ಹೆಗ್ಡೆ, ವಿಜಯ ಸೇರಿಗಾರ, ಹರೀಶ್ ಕೋಟ್ಯಾನ್, ಹರೀಶ್ ಕೊಡವೂರು, ಜಗದೀಶ್ ಚೆನ್ನಂಗಡಿ, ಲೋಕಾನಾಥ್, ಶ್ರೀಧರ್ ಕಾನಂಗಿ, ನವೀನ್ ಶೆಟ್ಟಿ ಉಪಸ್ಥಿತರಿದ್ದರು.
ಆಟೋ ಚಾಲಕ-ಮಾಲೀಕರ ಸಂಘ
ಮಾಹಿತಿ ಕೇಂದ್ರಕ್ಕೆ ಆಸ್ಕರ್ ಭೇಟಿ
ಮಣಿಪಾಲ: ಕೇಂದ್ರ ಭೂಸಾರಿಗೆ ಮತ್ತು ಹೆದ್ದಾರಿ ಸಚಿವ ಹಾಗೂ ಇಲ್ಲಿನ ಆಟೋರಿಕ್ಷಾ ಚಾಲಕರ ಸಂಘದ ಅಧ್ಯಕ್ಷ ಆಸ್ಕರ್ ಫೆರ್ನಾಂಡಿಸ್ ಅವರು ಆಟೋರಿಕ್ಷಾ ಚಾಲಕರ ಮಾಲೀಕರ ಸಂಘದ ಮಾಹಿತಿ ಕೇಂದ್ರಕ್ಕೆ ಇತೀಚಿಗೆ ಭೇಟಿ ನೀಡಿದರು. ಮಣಿಪಾಲ ಆಟೋರಿಕ್ಷಾ ಚಾಲಕರ ಮತ್ತು ಮಾಲೀಕರ ಸಂಘದ ವತಿಯಿಂದ ಸಂಘದ ಗೌರವಾಧ್ಯಕ್ಷ ಹಾಗೂ ನಗರಸಭಾ ಸದಸ್ಯ ರಮೇಶ್ ಕಾಂಚನ್ ಮತ್ತು ಸಂಘದ ಅಧ್ಯಕ್ಷ ವಿಜಯ ಪುತ್ರನ್ ಹಿರೇಬೆಟ್ಟು ಇವರು ರಿಕ್ಷಾ ಚಾಲಕರಿಗೆ ಇ.ಎಸ್.ಐ. ಸೌಲಭ್ಯ ಜಾರಿಗೊಳಿಸುವಂತೆ ಮನವಿ ನೀಡಿದರು. ಶಾಸಕ ಪ್ರಮೋದ್ ಮಧ್ವರಾಜ್, ಕೆ.ಪಿ.ಸಿ.ಸಿ. ಕಾರ್ಯದರ್ಶಿ ಎಂ.ಎ.ಗಫೂರ್, ಸಂಘದ ಪದಾಧಿಕಾರಿಗಳು ಇದ್ದರು. ಸದಸ್ಯ ವೆಂಕಟೇಶ ಶೆಟ್ಟಿಗಾರ್ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಗಣೇಶ್ ಪ್ರಭು ವಂದಿಸಿದರು.
5ರಂದು ಸಮೂಹ ಗಾಯನ ಸ್ಪರ್ಧೆ
ಉಡುಪಿ: ಭಾರತ ವಿಕಾಸ್ ಪರಿಷತ್ ವತಿಯಿಂದ ಉಡುಪಿ ಶಾಖಾ ಮಟ್ಟದ ರಾಷ್ಟ್ರೀಯ ಸಮೂಹ ಗಾಯನ ಸ್ಪರ್ಧೆಯು ಅ. 5ರಂದು ಮಧ್ಯಾಹ್ನ 2 ಗಂಟೆಗೆ ಟಿ.ಎ.ಪೈ. ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ ನಡೆಯಲಿದೆ. ಈ ಸ್ಪರ್ಧೆಯಲ್ಲಿ 6ನೇ ತರಗತಿಯಿಂದ 12ನೇ ತರಗತಿ ವರೆಗಿನ ವಿದ್ಯಾರ್ಥಿಗಳು 6ರಿಂದ 8ರ ಸಮೂಹದಲ್ಲಿ ಭಾಗವಹಿಸಬೇಕು. ಸ್ಫರ್ಧೆಯಲ್ಲಿ ಹಿಂದಿಕನ್ನಡ ಮತ್ತು ಸಂಸ್ಕೃತ ಜನಪದ ಗೀತೆಗಳನ್ನು ಭಾ.ವಿ.ಪ. ಪ್ರಕಟಿಸಿದ ಸ್ವರಸಂದೇಶ- ಗೀತಾರ್ಚನ ಪುಸ್ತಕದಿಂದಲೇ ಆರಿಸಿ ಹಾಡಬೇಕು ಎಂದು ಉಡುಪಿಯ ಭಾ.ವಿ.ಪ. ಭಾರ್ಗವ ಶಾಖೆ ಪ್ರಕಟಣೆಯಲ್ಲಿ ತಿಳಿಸಿದೆ.
6ರಂದು ರಕ್ತದಾನ ಶಿಬಿರ
ಕೋಟ: ಜಿ. ಶಂಕರ್ ಫ್ಯಾಮಿಟಿ ಟ್ರಸ್ಟ್ ಅಂಬಲಪಾಡಿ, ಲಕ್ಷ್ಮೀ ಸೋಮಬಂಗೇರ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಕೋಟ ಹಾಗೂ ಉಡುಪಿ ಜಿಲ್ಲಾಡಳಿತದ ವತಿಯಿಂದ ಅ.6 ರಂದು ಬೆಳಗ್ಗೆ 8ರಿಂದ 2 ಗಂಟೆಯವರೆಗೆ ಇಲ್ಲಿನ ಲಕ್ಷ್ಮೀ ಸೋಮಬಂಗೇರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ರಕ್ತದಾನ ಶಿಬಿರ ನಡೆಯಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಖಡ್ಗದೀಕ್ಷೆ ವಿರುದ್ಧ
ಪ್ರತಿಭಟನೆ
ಉಡುಪಿ: ಖಡ್ಗ ದೀಕ್ಷೆ ವಿರುದ್ಧ ಕ್ರಮಕೈಗೊಳ್ಳುವಂತೆ ಆಗ್ರಹಿಸಿ ಉಡುಪಿ ಘಟಕದ ಕೋಮು ಸೌಹಾರ್ದ ವೇದಿಕೆ ಪದಾಧಿಕಾರಿಗಳು ಮಂಗಳವಾರ ಸರ್ವಿಸ್ ಬಸ್ ನಿಲ್ದಾಣದ ಗಾಂಧಿ ಪ್ರತಿಮೆ ಎದುರು ಪ್ರತಿಭಟನೆ ನಡೆಸಿದರು. ಈ ರೀತಿ ಕಾನೂನು ಆಡಳಿತ ಧಿಕ್ಕರಿಸಿ ತಲವಾರು ವಿತರಿಸಲು ಹೊರಟಿರುವುದು ಕರ್ನಾಟಕದಲ್ಲಿ ಇದೇ ಮೊದಲ ಬಾರಿಯಾಗಿದೆ. ಈ ದೀಕ್ಷೆ ಕಾರ್ಯಕ್ರಮ ಸಂಘಟಿಸುತ್ತಿರುವ ವ್ಯಕ್ತಿಗಳ ಮತ್ತು ಸಂಘಟಕರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ವೇದಿಕೆ ಅಧ್ಯಕ್ಷ ಜಿ.ರಾಜಶೇಖರ್, ಡಿ.ಎಸ್.ಬೆಂಗ್ರೆ, ಸಂಘಟನೆಗಳ ನಾಯಕರಾದ ಫಾ. ವಿಲಿಯಂ ಮಾರ್ಟಿಸ್, ಜಯನ್ ಮಲ್ಪೆ, ಸುಂದರಿ ಪುತ್ತೂರು, ಹಯವದನ ಮೂಡಸಗ್ರಿ ಇದ್ದರು.