'ಲಿಂಗೋದ್ಭವ'ದ ಸುಳ್ಳು ಸುದ್ದಿ ವ್ಯಾಪಕ ಪ್ರಚಾರ
ಉಡುಪಿ: ಹಲವು ವರ್ಷಗಳ ಹಿಂದೆ ಇಲ್ಲಿಗೆ ಸಮೀಪದ ಪರ್ಕಳದಲ್ಲಿ ನೆಲದಿಂದ ತ್ರಿಶೂಲ ಉದ್ಭವಿಸಿದೆ ಎಂದು ಹೇಳಿ ಕುಟುಂಬವೊಂದು ಜನರನ್ನು ಯಾಮಾರಿಸುವುದಕ್ಕೆ ಪ್ರಯತ್ನಿಸಿತ್ತು. ಕೊನೆಗೆ ಅದು ಅವರೇ ನೆಲದಲ್ಲಿ ನೆಟ್ಟ ಇನ್ನೂ ಅಂಗಡಿಯ ಲೇಬಲ್ ತೆಗೆಯದ ಹೊಚ್ಚಹೊಸ ತ್ರಿಶೂಲ ಎಂಬುದು ಪತ್ತೆಯಾಗಿ ಜನರಿಂದ ಛೀಮಾರಿ ಹಾಕಿಸಿಕೊಂಡ ಘಟನೆ ನಡೆದಿತ್ತು. ಇದೀಗ ಶಿವಲಿಂಗದ ಸರದಿ...!
ಉಡುಪಿ ತಾಲೂಕಿನ ಮರ್ಣೆ ಗ್ರಾಮದ ಸಾಗು ಎಂಬಲ್ಲಿ ಕೆಲವು ಯುವಕರು ಪುರಾತನ ವೀರಗಲ್ಲನ್ನು ತೋರಿಸಿ ಇದು ಉದ್ಭವಲಿಂಗ ಎಂದು ಜನರನ್ನು ಮಂಕು ಮಾಡುವುದಕ್ಕೆ ವಿಫಲ ಪ್ರಯತ್ನ ಮಾಡಿದ್ದಾರೆ.
ಏನಿದು ಶಿವಲಿಂಗ?: ಇಲ್ಲಿನ ನದಿಯ ಬಳಿ ಈ ವೀರಗಲ್ಲನ್ನು ಸ್ಥಳೀಯ ಜನರು ನೂರಾರು ವರ್ಷಗಳಿಂದ ನೋಡುತ್ತಿದ್ದಾರೆ. ಆದರೆ, ಅದ್ಯಾಕೋ ಈ ಯುವಕರಿಗೆ ಅದನ್ನು ಈಗ ತಾನೇ ಉದ್ಭವಿಸಿದ ಶಿವಲಿಂಗ ಎಂದು ಹೇಳಿ ಪ್ರಚಾರ ಪಡೆಯುವ ಆಸೆ ಹುಟ್ಟಿತ್ತು, ಮಾತ್ರವಲ್ಲ ಅದಕ್ಕಾಗಿ 2 ದಿನಗಳಿಂದ ಮಾಧ್ಯಮದವರ ಹಿಂದೆ ಬಿದ್ದು ಸುಳ್ಳು ಪ್ರಚಾರವನ್ನೂ ಪಡೆದುಕೊಂಡರು.
ಸ್ಥಳೀಯ ಪತ್ರಿಕೆಯಲ್ಲಿ ಈ ಸುಳ್ಳು ಸುದ್ದಿ ಪ್ರಕಟವಾಗುತ್ತಿದ್ದಂತೆ, ಮರ್ಣೆ, ಪಕ್ಕದ ಪೆರ್ಣಂಕಿಲ, ಹಿರೇಬೆಟ್ಟ ಗ್ರಾಮದ ನೂರಾರು ಜನರು ಬುಧವಾರ ಬೆಳಗ್ಗೆ ಸ್ಥಳಕ್ಕೆ ಧಾವಿಸಿ ಹೋಗಿ ನೋಡಿ ಸುಳ್ಳೆಂದು ತಿಳಿದು ನಿರಾಶರಾದರು. ವರದಿಗಾಗಿ ಸ್ಥಳಕ್ಕೆ ಭೇಟಿ ನೀಡಿದ ಟಿ.ವಿ. ಮಾಧ್ಯಮದವರೂ ಸುಳ್ಳು ಹೇಳಿದ ಯುವಕರ ಮುಖದಲ್ಲಿ ಬೆವರಿಳಿಯುವಂತೆ ಬೈದು ಬಂದರು.
ವೀರಗಲ್ಲುಗಳಿವು: ಈ ಮರ್ಣೆ, ಪೆರ್ಣಂಕಿಲ, ಪಟ್ಲ, ಕುದಿ ಗ್ರಾಮಗಳಲ್ಲಿ ಇಂತಹ ಹತ್ತಿಪ್ಪತ್ತು ವೀರಗಲ್ಲುಗಳಿವೆ. ನಿಲ್ಲಿಸಲಾಗಿರುವ 2-3 ಅಡಿ ಎತ್ತರ ಅಗಲ ಚಪ್ಪಟೆ ಕಲ್ಲಿನ ಮಧ್ಯೆ ಈಶ್ವರನ ಲಿಂಗ ಮತ್ತು ಅದರ ಅಕ್ಕಪಕ್ಕಗಳಲ್ಲಿ ಸೂರ್ಯ ಚಂದ್ರರ ಚಿತ್ರಗಳಿವೆ.
ಹಿಂದೆ ರಾಜರ ಆಡಳಿತ ಕಾಲದಲ್ಲಿ ಯುದ್ಧದಲ್ಲಿ, ಸಮಾಜ ಸೇವೆಯಲ್ಲಿ, ಹುಲಿ ಇತ್ಯಾದಿ ಪ್ರಾಣಿಗಳಿಂದ ಮೃತಪಟ್ಟವರ ಗೌರವಾರ್ಥ ಈ ಕಲ್ಲುಗಳನ್ನು ನೆಡಲಾಗುತ್ತಿತ್ತು. ಇಲ್ಲಿದ್ದ ಶೈವ ಸಂಪ್ರದಾಯದಂತೆ ಈಶ್ವರ ಪಾದ ಸೇರಿದ ಈ ಸಾಹಸಿಯ ಹೆಸರು ಸೂರ್ಯ ಚಂದ್ರರಿರುವ ತನಕ ಅಜರಾಮರವಾಗಿರುತ್ತದೆ ಎನ್ನುವುದು ಈ ಚಿತ್ರಗಳ ಕೆತ್ತನೆಯ ಅರ್ಥವಾಗಿದೆ. ಈ ಕಲ್ಲುಗಳು ಅಷ್ಟೇನೂ ಆಕರ್ಷಕವಲ್ಲದ ಕಚ್ಚಾ ಕಲ್ಲು, ಕೆತ್ತನೆಗಳಾಗಿವೆ.
ಇತಿಹಾಸದ ದೃಷ್ಟಿಯಿಂದ ಒಂದೇ ಪ್ರದೇಶದಲ್ಲಿ ಹತ್ತಿಪ್ಪತ್ತು ಕಲ್ಲುಗಳಿರುವುದು ಅಧ್ಯಯನಕ್ಕೆ ಯೋಗ್ಯ ವಿಷಯವಾದರೂ, ಯಾರೋ ಕಿಡಿಗೇಡಿಗಳು ಜನರ ಅಮಾಯಕತೆಯನ್ನು ಬಳಸಿ ಮೋಸ ಮಾಡುವುದಕ್ಕೆ ಮಾತ್ರ ಅವಕಾಶವಾಗಬಾರದು.
-ಸುಭಾಶ್ಚಂದ್ರ ಎಸ್. ವಾಗ್ಳೆ