ಕಟಪಾಡಿ ಪೇಟೆ ಇಬ್ಭಾಗ ಇಲ್ಲ
ಉಡುಪಿ: ಸುರತ್ಕಲ್-ಕುಂದಾಪುರ ರಾ.ಹೆ. 66 ಅಗಲೀಕರಣ ಕಾಮಗಾರಿಯಿಂದ ಕಟಪಾಡಿ ಪೇಟೆಗೆ ಯಾವುದೇ ರೀತಿಯಲ್ಲಿ ಧಕ್ಕೆಯಾಗದಂತೆ, ರಾ.ಹೆ.ಯಿಂದಾಗಿ ಪೇಟೆ ಇಬ್ಭಾಗವಾಗದಂತೆ ಯೋಜನೆ ಮರುಪರಿಶೀಲಿಸಲಾಗುವುದು ಎಂದು ಕೇಂದ್ರ ಭೂ ಸಾರಿಗೆ ಮತ್ತು ಹೆದ್ದಾರಿ ಸಚಿವ ಆಸ್ಕರ್ ಫೆರ್ನಾಂಡಿಸ್ ಆಶ್ವಾಸನೆ ನೀಡಿದ್ದಾರೆ.
ಕಟಪಾಡಿಯಲ್ಲಿ ಹೆದ್ದಾರಿ ವಿಸ್ತರಣೆ ಯೋಜನೆಯಡಿ ಪೇಟೆಗೆ ತೊಂದರೆಯಾಗದಂತೆ ಕಾಮಗಾರಿ ನಡೆಸುವಂತೆ ಸ್ಥಳೀಯ ಗ್ರಾ.ಪಂ. ವತಿಯಿಂದ ಸಾರ್ವಜನಿಕರ ಪರವಾಗಿ ನೀಡಲಾದ ಮನವಿ ಸ್ವೀಕರಿಸಿ ಅವರು ಮಾತನಾಡಿದರು.
ಯೋಜನೆ ಮಾರ್ಪಾಟು ಅಗತ್ಯ: ರಾ.ಹೆ. 66ರ ಅಗಲೀಕರಣದ ಸಂದರ್ಭ ಗ್ರಾಮಾಂತರ ಪ್ರದೇಶಕ್ಕೆ ಅನ್ವಯಿಸುವ ಮಾನದಂಡಕ್ಕೆ ಅನುಸಾರವಾಗಿ ಯೋಜನೆ ಸಿದ್ಧಪಡಿಸಿದ್ದಿರಬಹುದು, ಆದರೆ ಕಟಪಾಡಿ ಪೇಟೆ ವೇಗವಾಗಿ ಬೆಳೆಯುತ್ತಿದ್ದು ಇಲ್ಲಿ ಓಡಾಡುವ ವಾಹನಗಳ ಸಂಖ್ಯೆ, ಜನಸಾಂದ್ರತೆ ಮತ್ತು ವ್ಯಾಪಾರ ವಹಿವಾಟುಗಳನ್ನು ಗಮನದಲ್ಲಿಟ್ಟುಕೊಂಡು ಯೋಜನೆಯಲ್ಲಿ ಮಾರ್ಪಾಟು ಮಾಡಬೇಕಾಗಿದೆ, ಸಂಸದ ಜಯಪ್ರಕಾಶ್ ಹೆಗ್ಡೆ, ಜಿಲ್ಲಾ ಉಸ್ತುವಾರಿ ಸಚಿವ ವಿನಯ ಕುಮಾರ್ ಸೊರಕೆ ಈ ಬಗ್ಗೆ ಗಮನಹರಿಸಲಿದ್ದು, ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದರು.
ನಗರಾಭಿವೃದ್ಧಿ ಸಚಿವ ವಿನಯ ಕುಮಾರ್ ಸೊರಕೆ ಮಾತನಾಡಿ, ಸದ್ಯದಲ್ಲೇ ಕಟಪಾಡಿ ಗ್ರಾ.ಪಂ. ಪಟ್ಟಣ ಪಂಚಾಯಿತಿ ಆಗಿ ಮೇಲ್ದರ್ಜೆಗೇರಲಿದೆ. ಹಾಗಾಗಿ ಇದನ್ನು ಗ್ರಾಮಾಂತರ ಪ್ರದೇಶವೆಂದು ಪರಿಗಣಿಸುವಂತಿಲ್ಲ, ನಗರ ಪ್ರದೇಶದ ಮಾನದಂಡಗಳನ್ನು ಅಳವಡಿಸಿ ರಾ.ಹೆ. ಕಾಮಗಾರಿ ನಡೆಯಲಿದೆ ಎಂದರು. ಸಂಸದ ಜಯಪ್ರಕಾಶ್ ಹೆಗ್ಡೆ, ಮಾಜಿ ಸಚಿವ ವಸಂತ ಸಾಲ್ಯಾನ್, ಕಾಂಗ್ರೆಸ್ ಮುಖಂಡರಾದ ಎಂ.ಎ.ಗಫೂರ್, ನವೀನ್ಚಂದ್ರ ಶೆಟ್ಟಿ, ಗ್ರಾ.ಪಂ. ಅದ್ಯಕ್ಷ ವಿನಯ ಬಲ್ಲಾಳ್, ಉಪಾದ್ಯಕ್ಷೆ ಪ್ರಭಾ ಶೆಟ್ಟಿ, ಕೋಟೆ ಗ್ರಾ.ಪಂ.ಅಧ್ಯಕ್ಷ ಪ್ರಶಾಂತ್ ಜತ್ತನ್ನ, ಜಿ.ಪಂ. ಸದಸ್ಯ ಕಟಪಾಡಿ ಶಂಕರ ಪೂಜಾರಿ, ತಾ.ಪಂ. ಸದಸ್ಯ ಶ್ರೀಕರ ಅಂಚನ್, ಜಿ.ಪಂ. ಮಾಜಿ ಅದ್ಯಕ್ಷೆ ಸರಸು ಬಂಗೇರ, ಕಟಪಾಡಿ ನಾಗರಿಕ ಸಮಿತಿ ಅಧ್ಯಕ್ಷ ಡಾ. ರವೀಂದ್ರನಾಥ್ ಶೆಟ್ಟಿ, ರಿಕ್ಷಾ ಯೂನಿಯನ್ ಗೌರವಾಧ್ಯಕ್ಷ ಪ್ರೇಮ್ ಕುಮಾರ್ ಇದ್ದರು.
ಕಟಪಾಡಿ ಪೇಟೆ ವೇಗವಾಗಿ ಬೆಳೆಯುತ್ತಿದ್ದು ಇಲ್ಲಿ ಓಡಾಡುವ ವಾಹನಗಳ ಸಂಖ್ಯೆ, ಜನಸಾಂದ್ರತೆ ಮತ್ತು ವ್ಯಾಪಾರ ವಹಿವಾಟುಗಳನ್ನು ಗಮನದಲ್ಲಿಟ್ಟುಕೊಂಡು ಯೋಜನೆಯಲ್ಲಿ ಮಾರ್ಪಾಟು ಮಾಡಬೇಕಾಗಿದೆ.
- ಆಸ್ಕರ್ ಫೆರ್ನಾಂಡಿಸ್, ಕೇಂದ್ರ ಸಚಿವ