ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಉಡುಪಿ

ಯಕ್ಷಗಾನಕ್ಕೆ ಸರ್ಕಾರದ ಪ್ರೋತ್ಸಾಹ ಸಾಲದು: ಡಾ. ಪ್ರಭಾಕರ ಜೋಶಿ

Vishwanath S
Updated On : 6 Oct 2013, 11:39 am

ಉಡುಪಿ: ಕಳೆದ 65 ವರ್ಷಗಳಿಂದ ಯಕ್ಷಗಾನ ಸೇರಿದಂತೆ ಕಲೆಗಳಿಗೆ ಸಾಂಸ್ಕೃತಿಕ ನೀತಿ- ನಿಯಮ ಅಳವಡಿಸಬೇಕು ಎಂಬ ಬೇಡಿಕೆ ಸಾರ್ವಜನಿಕವಾಗಿದೆ. ಆದರೆ, ಸರ್ಕಾರ ಈ ಬಗ್ಗೆ ಇದುವರೆಗೂ ಗಮನ ಹರಿಸಿಲ್ಲ. ಯಕ್ಷಗಾನ ರಂಗಕ್ಕೆ ಸರ್ಕಾರದ ಪ್ರೋತ್ಸಾಹ ಸಾಲದು ಎಂದು ಯಕ್ಷಗಾನ ವಿಮರ್ಶಕ, ವಿದ್ವಾಂಸ ಡಾ. ಪ್ರಭಾಕರ ಜೋಶಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಶನಿವಾರ ಇಲ್ಲಿನ ಎಂಜಿಎಂ ಕಾಲೇಜಿನಲ್ಲಿ ಬಿಡುಗಡೆಗೊಂಡ ಯಕ್ಷ ಛಾಯಾಗ್ರಾಹಕ ಮನೋಹರ ಎಸ್. ಕುಂದರ್ ಅವರ ಕನ್ನಡ ಹಾಗೂ ಇಂಗ್ಲಿಷ್ ಯಕ್ಷಗಾನ ಗ್ರಂಥ 'ಯಕ್ಷಗಾನ ರಂಗವೈಭವ'ವನ್ನು ಪರಿಚಯಿಸಿ ಅವರು ಮಾತನಾಡಿದರು. ಯಕ್ಷಗಾನ ಕಲೆ ಸರ್ಕಾರದ ಬೆಂಬಲ ಇಲ್ಲದೆ ಸಂಘ ಸಂಸ್ಥೆ ಮತ್ತು ಕೆಲವರ ವ್ಯಕ್ತಿಗತ ಬೆಂಬಲದಲ್ಲಿ ಉಳಿದು, ಬೆಳೆದುಬಂದಿದೆ. ಅಂಥವರಲ್ಲಿ ಮನೋಹರ್ ತಮ್ಮ ಕಲಾಭಿಮಾನವನ್ನು ಛಾಯಾಚಿತ್ರಗಳ ಮೂಲಕ ವಿಭಿನ್ನ ರೀತಿಯಲ್ಲಿ ಮೂಡಿಸಿ ಯಕ್ಷಗಾನ ಕಲೆಯನ್ನು ಸಾರ್ಥಕಗೊಳಿಸಿದ ವ್ಯಕ್ತಿ. ಈ ಗ್ರಂಥ ಯಕ್ಷಗಾನವನ್ನು ಪ್ರತಿಯೊಬ್ಬರಿಗೂ ಮುಟ್ಟಿಸುವಲ್ಲಿ ರಾಯಭಾರಿಯಾಗಿ ಕೆಲಸ ಮಾಡತ್ತದೆ ಎಂದು ಅಭಿಪ್ರಾಯಪಟ್ಟರು.
ತೆಂಕುತಿಟ್ಟಿನ ಹಿರಿಯ ಸ್ತ್ರೀ ವೇಷಧಾರಿ ಡಾ. ಕೊಳ್ಯೂರು ರಾಮಚಂದ್ರ ರಾವ್ ಮತ್ತು ಬಡಗುತಿಟ್ಟಿನ ಹಿರಿಯ ಸ್ತ್ರೀ ವೇಷಧಾರಿ ಮಾರ್ಗೋಳಿ ಗೋವಿಂದ ಸೇರಿಗಾರ್ ಜಂಟಿಯಾಗಿ ಪುಸ್ತಕ ಲೋಕಾರ್ಪಣೆ ಮಾಡಿ ಶುಭಹಾರೈಸಿದರು.
ಪ್ರಾದೇಶಿಕ ಸಂಶೋಧನಾ ಕೇಂದ್ರದ ನಿರ್ದೇಶಕ ಪ್ರೊ. ಹೆರಂಜೆ ಕೃಷ್ಣ ಭಟ್ ಅಧ್ಯಕ್ಷತೆ ವಹಿಸಿದ್ದರು. ಅತಿಥಿಗಳಾಗಿ ಕಾಪು ಕ್ಷೇತ್ರದ ಮಾಜಿ ಶಾಸಕ ಲಾಲಾಜಿ ಆರ್. ಮೆಂಡನ್, ಯಕ್ಷಗಾನ ವಿದ್ವಾಂಸ ಕೆ. ಎಂ. ರಾಘವ ನಂಬಿಯಾರ್, ಎಂಜಿಎಂ ಕಾಲೇಜಿನ ಪ್ರಾಂಶುಪಾಲ ಪ್ರೊ.ಹಾ.ಲಾ. ನಾಯಕ್, ಮಂಗಳೂರು ಎಸ್.ಕೆ.ಪಿ.ಎ. ಅಧ್ಯಕ್ಷ ವಾಸುದೇವ ರಾವ್ ಇದ್ದರು. ಕೃತಿಕಾರ ಮನೋಹರ್ ಕುಂದರ್ ಸ್ವಾಗತಿಸಿದರು.
ಎಂಜಿಎಂ ಕಾಲೇಜು ಕನ್ನಡ ವಿಭಾಗದ ಪ್ರಾಧ್ಯಾಪಕಿ ಕಾತ್ಯಾಯಿನಿ ಕುಂಜಿಬೆಟ್ಟು ನಿರೂಪಿಸಿದರು. ಈ ಸಂದರ್ಭ ತೆಂಕುತಿಟ್ಟಿನ ಹಿರಿಯ ಸ್ತ್ರೀ ವೇಷಧಾರಿ ಡಾ. ಕೊಳ್ಯೂರು ರಾಮಚಂದ್ರ ರಾವ್, ಬಡಗುತಿಟ್ಟಿನ ಹಿರಿಯ ಸ್ತ್ರೀ ವೇಷಧಾರಿ ಮಾರ್ಗೋಳಿ ಗೋವಿಂದ ಸೇರಿಗಾರ್ ಅವರನ್ನು ಅಭಿನಂದಿಸಲಾಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement