ವಿಧವೆ ಅರ್ಚಕಿಯರ ನೇಮಕ ಶತಮೂರ್ಖತನ: ಜಯಕೃಷ್ಣ
ಉಡುಪಿ; ಇದುವರೆಗೆ ಉಡುಪಿ- ದ.ಕ ಜಿಲ್ಲೆಗಳ ಔದ್ಯೋಗಿಕ ಮತ್ತು ರಾಜಕೀಯ ಕ್ಷೇತ್ರಗಳಲ್ಲಿ ಕೈಯಾಡಿಸಿ ವಿವಾದಕ್ಕೆ ಕಾರಣವಾಗಿದ್ದ ಮುಂಬೈಯಲ್ಲಿ ನೆಲೆಸಿರುವ ಕರಾವಳಿಯ ಭಾರೀ ಉದ್ಯಮಿಗಳು ಹುಟ್ಟು ಹಾಕಿರುವ ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿ ಈಗ ಧಾರ್ಮಿಕ ಕ್ಷೇತ್ರದಲ್ಲಿಯೂ ಕೈಯಾಡಿಸ ಹೊರಟಿದೆ. ಮಂಗಳೂರಿನ ಶ್ರೀ ಕುದ್ರೋಳಿ ಗೋಕರ್ಣನಾಥ ಕ್ಷೇತ್ರದಲ್ಲಿ ವಿಧವೆಯರನ್ನು ಅರ್ಚಕಿಯರನ್ನಾಗಿ ನೇಮಿಸುವುದಾಗಿ ಕೇಂದ್ರ ಮಾಜಿ ಸಚಿವ ಜನಾರ್ದನ ಪೂಜಾರಿ ಅವರ ಘೋಷಣೆಯನ್ನು ವಿರೋಧಿಸುವ ಮೂಲಕ ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿ ಹೊಸ ವಿವಾದವೊಂದನ್ನು ಹುಟ್ಟುಹಾಕಿದೆ.
ಸಮಿತಿಯ ವರಿಷ್ಠ ಮತ್ತು ಸ್ಥಾಪಕಾಧ್ಯಕ್ಷ ಜಯಕೃಷ್ಣ ಶೆಟ್ಟಿ ಅವರು ಶನಿವಾರ ಉಡುಪಿಯಲ್ಲಿ ಸುದ್ದಿಗೋಷ್ಠಿ ನಡೆಸಿ, ಹಿಂದೂ ದೇವಾಲಯಗಳಲ್ಲಿ ವಿಧವೆಯರನ್ನು ಅರ್ಚಕಿಯರನ್ನಾಗಿ ನೇಮಿಸುವುದು 'ಶತಮೂರ್ಖತನದ ಕೆಲಸ' ಎಂದು ಲೇವಡಿ ಮಾಡಿದ್ದಾರೆ.
ವಿಧವೆಯರಲ್ಲದ ಮಹಿಳೆಯರನ್ನು ದೇವಾಲಯಗಳಲ್ಲಿ ಅರ್ಚಕಿಯರನ್ನಾಗಿ ನೇಮಿಸಬಹುದು, ಆದರೆ ವಿಧವೆಯರನ್ನು ನೇಮಿಸಬಾರದು, ಇದರಿಂದ ದೇವಸ್ಥಾನವನ್ನು ಅಪಮೌಲ್ಯಗೊಳಿಸಿದಂತಾಗುತ್ತದೆ ಎಂದವರು ಅಭಿಪ್ರಾಯಪಟ್ಟರು.
ಮೂರ್ಖತನದ ಹೇಳಿಕೆ: ವಿಧವೆಯರು ಯಾಕೆ ಬೇಡ ಎನ್ನುವ ಪತ್ರಕರ್ತರ ಪ್ರಶ್ನೆಗೆ ಅವರು ನೀಡಿದ ಉತ್ತರ ಬಹಳ ವಿಚಿತ್ರವಾಗಿತ್ತು, ವಿಧವೆಯರಿಗೆ ತಿಂಗಳಿಗೊಮ್ಮೆ ಋತುಚಕ್ರದ ಸಮಸ್ಯೆ ಇರುತ್ತದೆ ಎಂದರು. ವಿಧವೆಯರಲ್ಲದ ಮಹಿಳೆಯರನ್ನು ಅರ್ಚಕಿಯಾಗಿ ನೇಮಿಸಿದರೆ ಅವರಿಗೂ ಈ ಸಮಸ್ಯೆ ಇರುತ್ತದೆಯಲ್ಲಾ ಎಂದು ಕೇಳಿದರೇ ಅಂತಹ ಸಂದರ್ಭದಲ್ಲಿ ಮಹಿಳೆಯರಿಗೆ ಸರಿಯಾದ ಕೇರ್ ತೆಗೆದುಕೊಳ್ಳುವುದು ಗೊತ್ತಿರುತ್ತದೆ. ಆದರೆ ಮೊದಲೇ ಮಾನಸಿಕವಾಗಿ ನೊಂದಿರುವ ವಿಧವೆಯರಿಗೆ ಇದೆಲ್ಲಾ ಸಾಧ್ಯವಿರುವುದಿಲ್ಲ, ಋತುಚಕ್ರ ಯಾವಾಗ ಆಗುತ್ತದೆ ಎನ್ನುವುದು ಅವರಿಗೆ ತಿಳಿದಿರುವುದಿಲ್ಲ ಎಂದು ಜಯಕೃಷ್ಣ ಶೆಟ್ಟಿ ಹೊಸ ಸಿದ್ಧಾಂತವನ್ನೇ ಮಂಡಿಸಿದರು.