ಕೊಳೆರೋಗ ಪರಿಹಾರ ತಕ್ಷಣ ವಿತರಿಸಿ: ಸೊರಕೆ
ಉಡುಪಿ: ಅಡಕೆ ಕೊಳೆರೋಗ ನಷ್ಟ ಪರಿಹಾರ ಬಿಡುಗಡೆಯಾಗಿದ್ದು, ನಷ್ಟಕ್ಕೊಳಗಾಗಿರುವ ಅಡಕೆ ಬೆಳೆಗಾರರಿಗೆ ತಕ್ಷಣ ಈ ಪರಿಹಾರ ಧನ ವಿತರಿಸುವಂತೆ ರಾಜ್ಯ ನಗರಾಭಿವೃದ್ಧಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ವಿನಯಕುಮಾರ್ ಸೊರಕೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಸೋಮವಾರ ತಾಪಂ ಸಭಾಂಗಣದಲ್ಲಿ ತಾಲೂಕು ಮಟ್ಟದ ಅಧಿಕಾರಿಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿ, ಈಗಾಗಲೇ ಉಡುಪಿ ಜಿಲ್ಲೆಗೆ ಕೊಳೆರೋಗ ಪರಿಹಾರ 3.25 ಕೋಟಿ ಬಿಡುಗಡೆಯಾಗಿದೆ. ಪ್ರತಿ ಹೆಕ್ಟೇರ್ಗೆ 12 ಸಾವಿರ ಪರಿಹಾರ ನೀಡಲಾಗುತ್ತಿದೆ. ಕಂದಾಯ- ತೋಟಗಾರಿಕೆ ಇಲಾಖೆ ಜಂಟಿಯಾಗಿ ಸಮೀಕ್ಷೆ ನಡೆಸಿ, ಒಂದು ವಾರದೊಳಗೆ ಪರಿಹಾರ ಚೆಕ್ ರೈತರ ಕೈ ಸೇರಬೇಕು ಎಂದು ಅಧಿಕಾರಿಗಳಿಗೆ ಆದೇಶಿಸಿದರು.