ಉಡುಪಿಯಲ್ಲಿ ಉಗ್ರ ಯಾಸೀನ್ ಭಟ್ಕಳ್ ಕುರಿತು ತನಿಖೆ
ಉಡುಪಿ: ಇಂಡಿಯನ್ ಮುಜಾಹಿದ್ದೀನ್ ಸಂಘಟನೆಯ ಭಯೋತ್ಪಾದಕರ ತನಿಖೆ ನಡೆಸುತ್ತಿರುವ ರಾಷ್ಟ್ರೀಯ ತನಿಖಾ ದಳ ಮಂಗಳವಾರ ಉಡುಪಿಗೂ ಆಗಮಿಸಿತ್ತು. ಈ ಭೇಟಿ ಅತ್ಯಂತ ಗೌಪ್ಯವಾಗಿದ್ದು, ಸ್ಥಳೀಯ ಪೊಲೀಸರಿಗೂ ಹೆಚ್ಚಿನ ಮಾಹಿತಿ ಇರಲಿಲ್ಲ. ಇತ್ತೀಚೆಗೆ ಸೆರೆ ಸಿಕ್ಕಿರುವ ಐಎಂ ಸಂಘಟನೆಯ ಉಗ್ರ ಯಾಸೀನ್ ಭಟ್ಕಳ್ ಮೂಲತಃ ಉತ್ತರ ಕನ್ನಡ ಜಿಲ್ಲೆಯ ಭಟ್ಕಳದವನು. ಕರಾವಳಿ ಜಿಲ್ಲೆಯಲ್ಲಿ ಈತನ ಓಡಾಟ, ಸಂಘಟನೆ, ಕಾರ್ಯಾಚರಣೆಗಳ ಬಗ್ಗೆ ರಾಷ್ಟ್ರೀಯ ತನಿಖಾ ದಳ ಹೆಚ್ಚಿನ ಮಾಹಿತಿ ಕಲೆ ಹಾಕುತ್ತಿದೆ. ಈ ಹಿನ್ನೆಲೆಯಲ್ಲಿ ಸೋಮವಾರ ಉತ್ತರ ಕನ್ನಡ ಜಿಲ್ಲೆಯಲ್ಲಿದ್ದ ಈ ತಂಡ, ಮಂಗಳವಾರ ಬೆಳಗ್ಗೆ ಉಡುಪಿಗೆ ಆಗಮಿಸಿತ್ತು. ನಂತರ ಮಂಗಳೂರಿಗೆ ತೆರಳಿದೆ. ಉಡುಪಿಯಲ್ಲಿ ಮಹತ್ವದ ಕಾರ್ಯಾಚರಣೆಗಳೇನೂ ನಡೆದಿಲ್ಲ. ಸ್ಥಳೀಯ ಪೊಲೀಸರಿಂದ ಕೆಲವು ಮಾಹಿತಿಗಳನ್ನಷ್ಟೇ ಸಂಗ್ರಹಿಸಲಾಗಿದೆ ಎನ್ನಲಾಗಿದೆ.