ಕಾಲುಬಾಯಿ ರೋಗ; ನಾಳೆ ಒಪ್ಪತ್ತು ಉಪವಾಸಕ್ಕೆ ಹಿಂದೂ ಯುವ ಸೇನೆ ಮನವಿ
ಕನ್ನಡಪ್ರಭ ವಾರ್ತೆ, ಉಡುಪಿ, ಅ. 8
ರಾಜ್ಯದಲ್ಲಿ 2 ಸಾವಿರಕ್ಕೂ ಅಧಿಕ ಗೋವುಗಳ ಸಾವಿಗೆ ಕಾರಣವಾಗಿರುವ ಕಾಲುಬಾಯಿ ರೋಗ ಕೂಡಲೇ ದೂರವಾಗುವಂತೆ ಪ್ರಾರ್ಥಿಸಿ ಅ.10ರಂದು ಒಪ್ಪತ್ತು (ಒಂದು ಹೊತ್ತಿನ) ಉಪವಾಸ ಆಚರಿಸುವಂತೆ ಹಿಂದೂ ಯುವ ಸೇನೆಯ ಉಡುಪಿ ಜಿಲ್ಲಾ ಘಟಕ ಹಿಂದೂ ಸಮಾಜವನ್ನು ವಿನಂತಿಸಿದೆ.
ಅಲ್ಲದೆ ಅಂದು ರಾತ್ರಿ ಉಡುಪಿಯ ಚಂದ್ರಮೌಳೀಶ್ವರ ದೇವಾಲಯದಲ್ಲಿ ವಿಶೇಷ ರುದ್ರಾಭಿಷೇಕ ಸಹಿತ ಸಾಮೂಹಿಕ ಪ್ರಾರ್ಥನೆಯನ್ನು ಯುವಸೇನೆ ಆಯೋಜಿಸಿದೆ. ಅದೇ ದಿನ ಎಲ್ಲ ಭಜನಾಮಂಡಳಿಗಳು ತಮ್ಮ ಸಂಘ ಅಥವಾ ಊರಿನ ದೇವಸ್ಥಾನಗಳಲ್ಲಿ ಗೋವಿನ ಶ್ರೇಯಸ್ಸಿಗಾಗಿ ಪ್ರಾರ್ಥಿಸಿ ಕನಿಷ್ಠ ಅರ್ಧ ಗಂಟೆ ವಿಶೇಷ ಭಜನೆ ನಡೆಸಬೇಕೆಂದು ವಿನಂತಿಸಲಾಗಿದೆ.
ಕಾಲುಬಾಯಿ ರೋಗ ದಸರಾ ಸಂಭ್ರಮಕ್ಕೆ ಒಂದು ಸೂತಕದಂತೆ ಕಾಣಿಸಿಕೊಂಡಿದೆ. ಒಂದು ಕಡೆಯಲ್ಲಿ ಅವ್ಯಾಹತವಾಗಿ ಗೋಹತ್ಯೆ, ಇನ್ನೊಂದೆಡೆ ಈ ಭೀಕರ ರೋಗಕ್ಕೆ ಸಾವಿರಾರು ದನಗಳು ಬಲಿಯಾಗಿರುವುದು ಗಾಯಕ್ಕೆ ಬರೆ ಎಳೆದಂತಾಗಿದೆ. ಇಂಥ ವಿಷಮ ಸ್ಥಿತಿಯಲ್ಲಿ ರಾಜ್ಯ ಸರ್ಕಾರ ಈ ಎರಡೂ ಸಮಸ್ಯೆಗಳಿಂದ ಜಾನುವಾರುಗಳನ್ನು ರಕ್ಷಿಸಿ ನಾಡಿನ ಹಿತ ಕಾಪಾಡಬೇಕು ಎಂದು ಯುವ ಸೇನೆ ಪ್ರಕಟಣೆಯಲ್ಲಿ ಆಗ್ರಹಿಸಿದೆ.