ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಉಡುಪಿ

ಕಾಲುಬಾಯಿ ರೋಗದಿಂದ ಗೋ ರಕ್ಷಣೆಗಾಗಿ ನಾಳೆ ಒಪ್ಪತ್ತು ಉಪವಾಸ: ಹಿಂದೂ ಯುವಸೇನೆ ಮನವಿ

Lingaraj Badiger
Updated On : 9 Oct 2013, 11:49 am

ಉಡುಪಿ: ರಾಜ್ಯದಲ್ಲಿ 2 ಸಾವಿರಕ್ಕೂ ಅಧಿಕ ಗೋವುಗಳ ಸಾವಿಗೆ ಕಾರಣವಾಗಿರುವ ಕಾಲುಬಾಯಿ ರೋಗ ಕೂಡಲೇ ದೂರವಾಗುವಂತೆ ಪ್ರಾರ್ಥಿಸಿ ಅ.10 ರಂದು ಒಪ್ಪತ್ತು (ಒಂದು ಹೊತ್ತಿನ) ಉಪವಾಸ ಆಚರಿಸುವಂತೆ ಹಿಂದೂ ಯುವ ಸೇನೆಯ ಉಡುಪಿ ಜಿಲ್ಲಾ ಘಟಕ ಹಿಂದೂ ಸಮಾಜವನ್ನು ವಿನಂತಿಸಿದೆ. ಅಲ್ಲದೆ ಅಂದು ರಾತ್ರಿ ಉಡುಪಿಯ ಚಂದ್ರಮೌಳೀಶ್ವರ ದೇವಾಲಯದಲ್ಲಿ ವಿಶೇಷ ರುದ್ರಾಭಿಷೇಕ ಸಹಿತ ಸಾಮೂಹಿಕ ಪ್ರಾರ್ಥನೆಯನ್ನು ಯುವಸೇನೆ ಆಯೋಜಿಸಿದೆ.
    ಅದೇ ದಿನ ಎಲ್ಲ ಭಜನಾಮಂಡಳಿಗಳು ತಮ್ಮ ಸಂಘ ಅಥವಾ ಊರಿನ ದೇವಸ್ಥಾನಗಳಲ್ಲಿ ಗೋವಿನ ಶ್ರೇಯಸ್ಸಿಗಾಗಿ ಪ್ರಾರ್ಥಿಸಿ ಕನಿಷ್ಠ ಅರ್ಧ ಗಂಟೆ ವಿಶೇಷ ಭಜನೆ ನಡೆಸಬೇಕು ಎಂದು ವಿನಂತಿಸಲಾಗಿದೆ. ಕಾಲುಬಾಯಿ ರೋಗವು ದಸರಾ ಸಂಭ್ರಮಕ್ಕೆ ಒಂದು ಸೂತಕದಂತೆ ಕಾಣಿಸಿಕೊಂಡಿದೆ. ಒಂದು ಕಡೆಯಲ್ಲಿ ಅವ್ಯಾಹತವಾಗಿ ಗೋಹತ್ಯೆ, ಇನ್ನೊಂದೆಡೆ ಈ ಭೀಕರ ರೋಗಕ್ಕೆ ಸಾವಿರಾರು ದನಗಳು ಬಲಿಯಾಗಿರುವುದು ಗಾಯಕ್ಕೆ ಬರೆ ಎಳೆದಂತಾಗಿದೆ. ಇಂಥ ವಿಷಮ ಸ್ಥಿತಿಯಲ್ಲಿ ರಾಜ್ಯ ಸರ್ಕಾರ ಈ ಎರಡೂ ಸಮಸ್ಯೆಗಳಿಂದ ಜಾನುವಾರುಗಳನ್ನು ರಕ್ಷಿಸಿ ನಾಡಿನ ಹಿತ ಕಾಪಾಡಬೇಕು ಎಂದು ಯುವ ಸೇನೆಯ ಜಿಲ್ಲಾಧ್ಯಕ್ಷ ವಾಸುದೇವ ಭಟ್ ಪೆರಂಪಳ್ಳಿ, ಕಾರ್ಯದರ್ಶಿ ಶಿವಕುಮಾರ್ ಕರ್ಜೆ, ಕೇಂದ್ರೀಯ ಮಂಡಳಿಯ ಅಧ್ಯಕ್ಷ ಯಶೋಧರ ಚೌಟ, ಪ್ರಧಾನ ಕಾರ್ಯದರ್ಶಿ ಪದ್ಮನಾಭ ನಾವೂರು ಮುಂತಾದವರು ಆಗ್ರಹಿಸಿದ್ದಾರೆ.
--
ತುಷಾರ್ ಭಟ್ ಜಿ. ರಾಷ್ಟ್ರಮಟ್ಟಕ್ಕೆ ಆಯ್ಕೆ

ಕೋಟ: ಕೇಂದ್ರ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಶಿವಮೊಗ್ಗದಲ್ಲಿ ಆಯೋಜಿಸಿದ ರಾಜ್ಯ ಮಟ್ಟದ ಇನ್ಸ್‌ಪಾಯರ್ ವಿಜ್ಞಾನ ಮಾದರಿ ವಸ್ತು ಪ್ರದರ್ಶನ ಸ್ಪರ್ಧೆಯಲ್ಲಿ ಭಾಗವಹಿಸಿದ ಕೋಟ ವಿವೇಕ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಯಾಗಿದ್ದ ಪ್ರಸ್ತುತ ವಿವೇಕ ಪ.ಪೂ. ಕಾಲೇಜಿನಲ್ಲಿ ಅಭ್ಯಸಿಸುತ್ತಿರುವ ತುಷಾರ್ ಭಟ್ ಜಿ. ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.  ಇವರು ಗಣಪತಿ ಭಟ್ ಮತ್ತು ಸುಧಾ ಹೆಗಡೆ ದಂಪತಿ ಪುತ್ರ. ವಿಜ್ಞಾನ ಶಿಕ್ಷಕಿ ವಿನಿತಾ ಅವರ ಮಾರ್ಗದರ್ಶನದಲ್ಲಿ ಅಭಿವೃದ್ಧಿ ಪಡಿಸಿದ ಮಾಡರ್ನ್ ಕಾರ್ ಪಾರ್ಕಿಂಗ್ ಸಿಸ್ಟಮ್ ಎಂಬ ಮಾದರಿಯನ್ನು ಅ. 8ರಿಂದ 10ರವರೆಗೆ ನವ ದೆಹಲಿಯಲ್ಲಿ ನಡೆಯಲಿರುವ ರಾಷ್ಟ್ರಮಟ್ಟದ ಸ್ಪರ್ಧೆಯಲ್ಲಿ ಪ್ರದರ್ಶಿಸಲಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement