'ಸಂಧ್ಯಾರಾಗ' ಪತ್ರಿಕೆ ಬಿಡುಗಡೆ
ಉಡುಪಿ: ಮಾನವಿಕ ವಿಷಯಗಳನ್ನು ಆಯ್ದುಕೊಳ್ಳುವ ವಿದ್ಯಾರ್ಥಿಗಳ ಸಂಖ್ಯೆ ಇಳಿಮುಖವಾಗುತ್ತಿರುವುದು ನಮ್ಮ ಸಂಸ್ಕೃತಿಯ ಹಿನ್ನಡೆಗೆ ಕಾರಣವಾಗಿದೆ. ಕೇವಲ ವ್ಯಾವಹಾರಿಕ ವಿಷಯಗಳನ್ನು ಅಧ್ಯಯನ ಮಾಡುವುದರಿಂದ ಸಬಲ ಸಮಾಜ ನಿರ್ಮಾಣ ಸಾಧ್ಯವಿಲ್ಲ ಎಂದು ಉಡುಪಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹಪ್ರಾಧ್ಯಾಪಕ ಸುರೇಶ್ ರೈ ಅಭಿಪ್ರಾಯಪಟ್ಟಿದ್ದಾರೆ.
ಅವರು ನಗರದ ಶ್ರೀ ಪೂರ್ಣಪ್ರಜ್ಞ ಸಂಧ್ಯಾ ಕಾಲೇಜಿನ ಮಾನವಿಕ ಮತ್ತು ಸಾಹಿತ್ಯ ಸಂಘ ಆಯೋಜಿಸಿದ್ದ 'ಸಂಧ್ಯಾರಾಗ' ಪತ್ರಿಕೆ ಬಿಡುಗಡೆ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿ, ನಮ್ಮ ಸಂಸ್ಕೃತಿಯನ್ನು ಬಲವಾಗಿ ಉಳಿಸಿಕೊಂಡು ಹೋಗುವ ಜವಾಬ್ದಾರಿಯನ್ನು ಮಾನವಿಕ ವಿಷಯಗಳ ಅಧ್ಯಯನದಿಂದ ಮಾತ್ರ ಯುವಕರು ಪಡೆದುಕೊಳ್ಳಬಲ್ಲರು ಎಂದು ತಿಳಿಸಿದರು.
ಕಾಲೇಜು ಆಡಳಿತ ಮಂಡಳಿ ಕಾರ್ಯದರ್ಶಿ ನ್ಯಾಯವಾದಿ ಪ್ರದೀಪ ಕುಮಾರ್ ಮತ್ತು ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲರಾದ ಡಾ. ಮಾಧವಿ ಎಸ್. ಭಂಡಾರಿ ಅವರು ವಿದ್ಯಾರ್ಥಿಗಳಿಗೆ ಹಿತನುಡಿಗಳನ್ನು ನೀಡಿದರು. ಅಧ್ಯಾಪಕ ಸಲಹೆಗಾರರಾದ ಪ್ರೊ. ಯಶವಂತ ಆಚಾರ್ ಮತ್ತು ದುರ್ಗಾಲಕ್ಷ್ಮೀ ಇದ್ದರು.
ಸಾಂಸ್ಕೃತಿಕ ಕಾರ್ಯದರ್ಶಿ ಶಶಿರ ಅತಿಥಿಗಳನ್ನು ಸ್ವಾಗತಿಸಿದರು. ಮೇಘನಾ ಪ್ರಾರ್ಥಿಸಿದರು. ಜನಾರ್ದನ ವಂದಿಸಿದರು. ಕಾರ್ತಿಕ್ ಕಾರ್ಯಕ್ರಮ ನಿರೂಪಿಸಿದರು.