ಉಡುಪಿ ಜಿಲ್ಲಾ ಬಿಜೆಪಿ ಪದಗ್ರಹಣ
ಉಡುಪಿ: ಭ್ರಷ್ಟಾಚಾರ ಮುಕ್ತ, ಬಡತನ ಮುಕ್ತ ಭಾರತ ನಿರ್ಮಾಣವಾಗಬೇಕಾದರೆ ಮೊದಲು ದೇಶ ಕಾಂಗ್ರೆಸ್ ಮುಕ್ತವಾಗಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಪ್ರಹ್ಲಾದ್ ಜೋಷಿ ಹೇಳಿದ್ದಾರೆ.
ಬುಧವಾರ ಜಿಲ್ಲಾ ಬಿಜೆಪಿ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಅವರು ಮಾತನಾಡಿದರು.
ಯುಪಿಎ ಸರ್ಕಾರ 5 ವರ್ಷಗಳಲ್ಲಿ ರು. 60 ಲಕ್ಷ ಕೋಟಿಗಳಿಗೂ ಹೆಚ್ಚು ಮೊತ್ತದ ಭ್ರಷ್ಟಾಚಾರಗಳನ್ನು ಮಾಡಿದೆ. ದೇಶದಲ್ಲಿಯೇ ಪ್ರಥಮ ಬಾರಿಗೆ ಕೈಗಾರಿಕಾ ಬೆಳವಣಿಗೆ ಮತ್ತು ಕೃಷಿ ಬೆಳವಣಿಗೆ ಋಣಾತ್ಮಕ ದಿಕ್ಕಿನಲ್ಲಿ ಸಾಗುತ್ತಿದೆ. ಇದೇ ರೀತಿ ದೇಶ ಮುದುವರಿದರೆ ದೇಶವೇ ಋಣಾತ್ಮಕ ದಿಕ್ಕಿನಲ್ಲಿ ಸಾಗಲಿದೆ, ಆದ್ದರಿಂದ ದೇಶವನ್ನು ಕಾಂಗ್ರೆಸ್ ಕೈಯಿಂದ ಕಾಪಾಡಬೇಕಾಗಿದೆ ಎಂದವರು ಹೇಳಿದರು.
ಮಾಜಿ ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ ಮಾತನಾಡಿ, ಜನತೆ ಉತ್ತಮ ಆಡಳಿತವನ್ನು ಮಾತ್ರ ಬಯಸುವುದಿಲ್ಲ, ಅಧಿಕಾರದಲ್ಲಿರುವವರು ವ್ಯಕ್ತಿಗತವಾಗಿ ಉತ್ತಮ ನಡವಳಿಕೆಯವರಾಗಿರಬೇಕು, ಆಂತರಿಕ ಕಚ್ಚಾಟ ನಡೆಸಬಾರದು ಎಂದೂ ಬಯಸುತ್ತಾರೆ. ಇದನ್ನು ಅರಿತುಕೊಳ್ಳದ ಬಿಜೆಪಿಯನ್ನು ಜನರು ತಿರಸ್ಕರಿಸಿದ್ದಾರೆ, ಇದು ತಾತ್ಕಾಲಿಕ ಹಿನ್ನಡೆ ಮಾತ್ರ ಎಂದು ಹೇಳಿದರು.
ಮಾಜಿ ಸಚಿವರಾದ ಸಿ.ಟಿ. ರವಿ, ಕೋಟ ಶ್ರೀನಿವಾಸ ಪೂಜಾರಿ, ದ.ಕ. ಜಿಲ್ಲಾಧ್ಯಕ್ಷ ಪ್ರತಾಪ್‌ಸಿಂಹ ನಾಯಕ್, ವಿಧಾನ ಪರಿಷತ್ ಸದಸ್ಯ ಮೋನಪ್ಪ ಭಂಡಾರಿ, ಸುಲೋಚನಾ ಭಟ್, ಶಾಸಕ ಸುನಿಲ್ ಕುಮಾರ್, ಮಾಜಿ ಶಾಸಕರಾದ ರಘುಪತಿ ಭಟ್, ಲಕ್ಷ್ಮೀನಾರಾಯಣ, ಲಾಲಾಜಿ ಮೆಂಡನ್, ಪಕ್ಷದ ಇತರ ನಾಯಕರು ಇದ್ದರು. ನಿರ್ಗಮನ ಜಿಲ್ಲಾಧ್ಯಕ್ಷ ಉದಯಕುಮಾರ್ ಶೆಟ್ಟಿ, ನೂತನ ಅಧ್ಯಕ್ಷ ತಿಂಗಳೆ ವಿಕ್ರಮಾರ್ಜುನ ಹೆಗ್ಡೆ ಅವರಿಗೆ ಅಧಿಕಾರ ಹಸ್ತಾಂತರಿಸಿದರು.