ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಉಡುಪಿ

ವಿವಿಧೆಡೆ ಶಾರದಾ ದೇವಿ ಆರಾಧನೋತ್ಸವ

Mainashree
Updated On : 12 Oct 2013, 11:39 am

ಕುಂದಾಪುರ: ನಮ್ಮ ದೇಶದಲ್ಲಿ ಅನೇಕ ಹಬ್ಬ, ಹರಿದಿನಗಳನ್ನು ನಿತ್ಯ ಆಚರಿಸಲಾಗುತ್ತದೆ, ಈ ಪ್ರತಿಯೊಂದು ಹಬ್ಬದ ಹಿಂದೆಯೂ ನಮ್ಮ ಸಂಸ್ಕೃತಿ ಇದೆ, ಇದನ್ನು ತಿಳಿದು ಹಬ್ಬಗಳನ್ನು ಆಚರಿಸಿದರೇ ಮಾತ್ರ ಆಚರಣೆಗೆ ಸಾರ್ಥಕವಾಗುತ್ತದೆ ಎಂದು ಆನೆಗುಡ್ಡೆ ಶ್ರೀವಿನಾಯಕ ದೇವಸ್ಥಾನದ ಆಡಳಿತ ಧರ್ಮದರ್ಶಿ ಕೆ. ಸೂರ್ಯನಾರಾಯಣ ಉಪಾಧ್ಯಾಯ ಹೇಳಿದರು.
ಅವರು ಇಲ್ಲಿನ ಕೋಟೇಶ್ವರದಲ್ಲಿ ಕೋಟಿಲಿಂಗೇಶ್ವರ ದೇವಸ್ಥಾನದ ರಥಬೀದಿಯಲ್ಲಿ ಸಾರ್ವಜನಿಕ ಶ್ರೀಶಾರದೋತ್ಸವ ಸಮಿತಿಯ ಪ್ರಥಮ 'ಶಾರದಾ ದೇವಿಯ ಆರಾಧನೋತ್ಸವ' ಕಾರ್ಯಕ್ರಮದ ಮೊದಲ ದಿನದ ಧಾರ್ಮಿಕ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು.
ಶಾರದೋತ್ಸವ ಸಮಿತಿ ಅಧ್ಯಕ್ಷ ಗೋಪಾಲಕೃಷ್ಣ ಶೆಟ್ಟಿ ಮಾರ್ಕೋಡು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕುಂಭಾಷಿ ಸದ್ಗುರು ಶ್ರೀಧರಕೃಪಾ ಆಯುರ್ವೇದಾಶ್ರಮದ ಆಚಾರ್ಯ ಡಾ.ಕೆ. ಶ್ರೀಧರದಾಸ್‌ಜೀ ಧಾರ್ಮಿಕ ಉಪನ್ಯಾಸ ನೀಡಿದರು.
ಅತಿಥಿಗಳಾಗಿ ಕೋಟೇಶ್ವರ ಗ್ರಾಪಂ ಅಧ್ಯಕ್ಷ ರಾಜಶೇಖರ ಶೆಟ್ಟಿ, ಧ.ಗ್ರಾ. ಯೋಜನೆಯ ವಿಷ್ಣು, ಶ್ರೀಶಾರದೋತ್ಸವ ಸಮಿತಿ ಕಾರ್ಯದರ್ಶಿ ವಿಶ್ವನಾಥ ಆಚಾರ್ಯ ತೆಕ್ಕಟ್ಟೆ ಮೊದಲಾದವರು ಉಪಸ್ಥಿತರಿದ್ದರು.
ಸಮಿತಿಯ ಸಾಂಸ್ಕೃತಿಕ ಕಾರ್ಯದರ್ಶಿ ಸುಬ್ರಹ್ಮಣ್ಯ ಶೆಟ್ಟಿ ಸ್ವಾಗತಿಸಿ, ಚಂದ್ರಶೇಖರ್ ಬೀಜಾಡಿ ಕಾರ್ಯಕ್ರಮ ನಿರೂಪಿಸಿದರು. ವಿಶ್ವನಾಥ ಆಚಾರ್ಯ ವಂದಿಸಿದರು.
ಅಜೆಕಾರಿನಲ್ಲಿ...: ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಡಾ. ಸಂತೋಷ್ ಕುಮಾರ್ ಅಧ್ಯಕ್ಷತೆಯಲ್ಲಿ ಅಜೆಕಾರಿನಲ್ಲಿ ಮೊದಲನೇ ವರ್ಷದ ಸಾರ್ವಜನಿಕ ಶ್ರೀ ಶಾರದಾ ಮಹೋತ್ಸವದ ಸಭಾ ಕಾರ್ಯಕ್ರಮವನ್ನು ಆಜೆಕಾರು ಶ್ರೀ ರಾಮ ಮಂದಿರದ ಮಾಜಿ ಅಧ್ಯಕ್ಷ ವಸುದೇವ ಎನ್. ಕಿಣಿ ಉದ್ಘಾಟಿಸಿದರು.
 ಮುಂಬಯಿಯ ಉದ್ಯಮಿ- ಆಹಾರ್‌ನ ಮಾಜಿ ಅಧ್ಯಕ್ಷ ದೇವಸ್ಯ ಜಿ. ಶಿವರಾಮ ಶೆಟ್ಟಿ, ನಿವೃತ್ತ ಮುಖ್ಯೋಪಾಧ್ಯಾಯ ಭಾಸ್ಕರ ಶೆಟ್ಟಿ ಕುಂಠಿನಿ, ಸಮಿತಿಯ ಪ್ರಧಾನ ಕಾರ್ಯದರ್ಶಿ ರಾಮಕೃಷ್ಣ ಶೆಟ್ಟಿ, ವೇದಮೂರ್ತಿ ಅರುಣ್ ಭಟ್, ಶೇಖರ ಅಜೆಕಾರು ಮತ್ತು ಸಮಿತಿಯ ಪದಾಧಿಕಾರಿಗಳು, ಗೌರವ ಸಲಹೆಗಾರರು ಇದ್ದರು.
ಬೆಳಗ್ಗೆ 8.30ಕ್ಕೆ ಮೆರವಣಿಗೆಯಲ್ಲಿ ಶಾರದಾ ಮೂರ್ತಿಯನ್ನು ತಂದು ಪ್ರತಿಷ್ಠಾಪಿಸಲಾಯಿತು. ವೇದಮೂರ್ತಿ ಅರುಣ್ ಭಟ್ ನೇತೃತ್ವದಲ್ಲಿ ಪ್ರತಿಷ್ಠಾಪನಾ ಪೂಜೆ, ದುರ್ಗಾ ಹೋಮ ನಡೆಯಿತು.
ಅಜೆಕಾರು ಸಮೀಪದ ಕಾಡುಹೊಳೆ ಅಂಗನವಾಡಿ ಮತ್ತು ಸರ್ಕಾರಿ ಶಾಲೆ, ಅಜೆಕಾರಿನ ಜ್ಯೋತಿ ಹೈಸ್ಕೂಲ್, ವಿವೇಕಾನಂದ ನರ್ಸರಿ ಇಂಗ್ಲಿಷ್ ಮೀಡಿಯಂ ಶಾಲೆ, ರಾಧಾ ನಾಯಕ್ ಹೈಸ್ಕೂಲ್ ಎಣ್ಣೆಹೊಳೆ ಸೇರಿದಂತೆ ವಿವಿಧೆಡೆಯ ಮಕ್ಕಳು ತಮ್ಮ ನೃತ್ಯ ಸಹಿತ ಪ್ರತಿಭಾ ಪ್ರದರ್ಶನ ನೀಡಿದರು. ಶಾಲಾ ಶಿಕ್ಷಕರನ್ನು ನೆನಪಿನ ಕಾಣಿಕೆ ನೀಡಿ ಗೌರವಿಸಲಾಯಿತು.
ಇಲ್ಲಿನ ಸಮಾರಂಭಕ್ಕೆ ಹಿಂದು, ಮುಸ್ಲಿಮ್ ಮತ್ತು ಕ್ರೈಸ್ತರು ಅಕ್ಕಪಕ್ಕದಲ್ಲಿ ಶುಭ ಕೋರುವ ಬೃಹತ್ ಫಲಕ ಪ್ರದರ್ಶಿಸಿ ಭಾವೈಕ್ಯತೆಯನ್ನು ಪ್ರದರ್ಶಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement