ಸುದ್ದಿ ಸಂಕ್ಷೇಪ
ಮಣಿಪಾಲದಲ್ಲಿ ನಾಳೆಯಿಂದ 'ಭುವಿ' ಆರಂಭ
ಉಡುಪಿ: ದೇಶದ ಬೇರೆ ಬೇರೆ ಪ್ರದೇಶದ ಸಾಂಪ್ರದಾಯಿಕ ಕಲೆ, ಕೈ ಮಗ್ಗದ ಬಟ್ಟೆ, ಕರಕುಶಲ ವಸ್ತುಗಳ ಪ್ರದರ್ಶನ ಮತ್ತು ಮಾರಾಟ ಮಳಿಗೆ 'ಭುವಿ' ಮಣಿಪಾಲದಲ್ಲಿ 14ರಿಂದ ಆರಂಭವಾಗಲಿದೆ ಎಂದು ಮಳಿಗೆಯ ಸಂಯೋಜಕ ಪ್ರಸಿದ್ಧ ಕಲಾವಿದ ಪುರುಷೋತ್ತಮ ಅಡ್ವೆ ತಿಳಿಸಿದ್ದಾರೆ. ಕೇವಲ ಮಾರಾಟದ ಉದ್ದೇಶ ಅಲ್ಲ, ಕಲಾವಿದರನ್ನು ಪ್ರೋತ್ಸಾಹಿಸುವ, ಬೇರೆ ಪ್ರದೇಶದ ಸಾಂಪ್ರದಾಯಿಕ - ಜನಪದ ಕಲೆ ಮತ್ತು ವಸ್ತುಗಳನ್ನು ಉಡುಪಿಯ ಜನತೆಗೆ ಪರಿಚಯಿಸುವ ಮತ್ತು ಅವುಗಳ ಬಗ್ಗೆ ಅಭಿರುಚಿ ಬೆಳೆಸುವ ಉದ್ದೇಶ ಈ ಮಳಿಗೆಯ ಹಿಂದಿದೆ ಎಂದು ತಿಳಿಸಿದ್ದಾರೆ. ಮಣಿಪಾಲದ ಜಿಲ್ಲಾಧಿಕಾರಿ ಕಚೇರಿ ರಸ್ತೆಯಲ್ಲಿರುವ ಈ ಮಳಿಗೆಯನ್ನು ಕುಂದಾಪುರದ ನಮ್ಮ ಭೂಮಿಯ ನಿರ್ದೇಶಕ ದಾಮೋದರ ಆಚಾರ್ಯ, ಮಹಿಳಾ ಉದ್ಯಮಿ ರೇಣು ಜಯರಾಮ್, ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕ ಅರುಣ್ ಕುಮಾರ್, ವೈದ್ಯೆ ಡಾ. ಗಿರಿಜಾ ಉಪಸ್ಥಿತಿಯಲ್ಲಿ ಸೋಮವಾರ 10.30ಕ್ಕೆ ಉದ್ಘಾಟನೆಗೊಳ್ಳಲಿದೆ.
16ರಂದು ನವರಾತ್ರಿ ಮಹೋತ್ಸವ
ಗಂಗೊಳ್ಳಿ: ಸುಮಾರು 450 ವರ್ಷಗಳಿಗಿಂತಲೂ ಅಧಿಕ ಇತಿಹಾಸ ಇರುವ ಕುಂದಾಪುರ ತಾಲೂಕಿನ ಬಸ್ರೂರು ಶ್ರೀಮಹಾಲಸಾ ನಾರಾಯಣೀ ದೇವಸ್ಥಾನದಲ್ಲಿ ನವರಾತ್ರಿ ಮಹೋತ್ಸವ ಅಂಗವಾಗಿ ಚಂಡಿಕಾ ಹವನವು ಅ.16ರಂದು ನಡೆಯಲಿದೆ. ಅಂದು ಮಧ್ಯಾಹ್ನ 12 ಗಂಟೆಗೆ ಯಜ್ಞದ ಪೂರ್ಣಾಹುತಿ, ಮಹಾಪೂಜೆ, ಗ್ರಾಮಪುರುಷ ದರ್ಶನ ಸೇವೆ, ಹರಕೆ ಸೀರೆಗಳ ಏಲಂ ಮೊದಲಾದ ಕಾರ್ಯಕ್ರಮಗಳು ನಡೆಯಲಿದ್ದು, ಸಂಜೆ ರಜತ ಪಲ್ಲಕಿ ಉತ್ಸವ ನಡೆಯಲಿದೆ.
ಮುದ್ರಾಡಿ: ಅಕ್ಷರದಾಸೋಹ ಕಟ್ಟಡಕ್ಕೆ ಶಿಲಾನ್ಯಾಸ
ಕಾರ್ಕಳ: ಮುದ್ರಾಡಿ ಗ್ರಾಮದ ಬಲ್ಲಾಡಿ ಹಿರಿಯ ಪ್ರಾಥಮಿಕ ಶಾಲೆಯ ಅಕ್ಷರದಾಸೋಹದ ನೂತನ ಕಟ್ಟಡಕ್ಕೆ ಶಾಸಕ ವಿ. ಸುನಿಲ್ ಕುಮಾರ್ ಇತ್ತೀಚೆಗೆ ಶಿಲಾನ್ಯಾಸ ನೆರವೇರಿಸಿದರು. ಜಿ.ಪಂ. ಸದಸ್ಯರಾದ ಮಂಜುನಾಥ ಪೂಜಾರಿ, ಅಶೋಕ್ ಕುಮಾರ್ ಶೆಟ್ಟಿ, ಗಣಪತಿ ಮುದ್ರಾಡಿ, ಶಾಲೆಯ ಮುಖ್ಯಶಿಕ್ಷರು, ಶಿಕ್ಷಕರು ಇದ್ದರು.