ವಿಜಯದಶಮಿ: ಕೊಲ್ಲೂರಲ್ಲಿ ಕೇರಳಿಗರ ಕಲರವ
ಕೊಲ್ಲೂರು: ನಮ್ಮ ರಾಜ್ಯದ ಧಾರ್ಮಿಕ ದತ್ತಿ ಇಲಾಖೆಗೆ ಅತಿ ಹೆಚ್ಚಿನ ಆದಾಯ ತಂದುಕೊಡುವ ಕ್ಷೇತ್ರಗಳಲ್ಲೊಂದಾದ ಇಲ್ಲಿನ ಶ್ರೀಮುಕಾಂಬಿಕಾ ಸನ್ನಿಧಿಗೆ ಕನ್ನಡಿಗರಿಗಿಂತಲೂ ಕೇರಳಿಗರೇ ಹೆಚ್ಚಿನ ಸಂಖ್ಯೆಯ ಭಕ್ತರು ಪ್ರತಿವರ್ಷದಂತೆ, ಸೋಮವಾರ ವಿಜದಶಮಿಯಂದು ಮುಕಾಂಬಿಕೆಯ ಸನ್ನಿಧಿಯಲ್ಲಿ ಕೇರಳಿಗ ಭಕ್ತರು ತುಂಬಿ ತುಳುಕುತ್ತಿದ್ದರು, ಎಲ್ಲಿ ಕೇಳಿದರೂ ಮಲಯಾಳವೇ ಕೇಳುತ್ತಿತ್ತು, ಕನ್ನಡ ಕ್ಷೀಣವಾಗಿತ್ತು.
ಮಿನಿ ಕೇರಳ ಸೃಷ್ಟಿ: ವಿಜಯದಶಮಿಯದ ದಿನ ಇಲ್ಲಿ ನಡೆಯುವ 'ವಿದ್ಯಾರಂಭ' ಎಂಬ ಸಂಪ್ರದಾಯದಲ್ಲಿ ಭಾಗವಹಿಸುವುದು ಕೇರಳಿಗರಿಗೆ ಅತ್ಯಂತ ಶ್ರೇಷ್ಠ ಮತ್ತು ಪುಣ್ಯದ ಕೆಲಸವಾಗಿದೆ. ಸಾಕ್ಷರತೆಯಲ್ಲಿ ದೇಶದಲ್ಲಿಯೇ ಮೊದಲ ಸ್ಥಾನದಲ್ಲಿರುವ ಕೇರಳಿಗರು ತಮ್ಮ ಮಕ್ಕಳಿಗೆ ಕೊಲ್ಲೂರು ದೇವಿಯ ಸನ್ನಿಧಿಯಲ್ಲಿ ವಿದ್ಯಾರಂಭ ಮಾಡಿಸಿದರೆ ಆ ಮಕ್ಕಳು ಉತ್ತಮ ಸಾಧನೆ ಮಾಡುತ್ತಾರೆ ಎಂದು ನಂಬುತ್ತಾರೆ. ಆದ್ದರಿಂದಲೇ ವಿಜಯದಶಮಿಯಂದು ಕೇರಳದ ನಾನಾ ಮೂಲೆಗಳಿಂದ ಹೆತ್ತವರು ತಮ್ಮ ಎಳೆಯ ಕಂದಮ್ಮಗಳೊಂದಿಗೆ ಇಲ್ಲಿಗೆ ಧಾವಿಸಿ ಬರುತ್ತಾರೆ.
ಮಹಾನವಮಿ ರಥೋತ್ಸವ: ವಿಜಯದಶಮಿಯ ದಿನ ಸೂರ್ಯನ ಬೆಳಕು ಹರಿಯುತ್ತಲೇ ಆರಂಭವಾಗುವ ಈ ವಿದ್ಯಾರಂಭದಲ್ಲಿ ಭಾಗವಹಿಸುವುದಕ್ಕೆ ಹಿಂದಿನ ದಿನವೇ ಅಂದರೆ ಮಹಾನವಮಿಯಂದೇ ಜನರು ಇಲ್ಲಿಗೆ ಬರುವುದರಿಂದ ಮಹಾನವಮಿಯ ರಥೋತ್ಸವ ಅತ್ಯಂತ ವೈಭವದಿಂದ ನಡೆಯುತ್ತದೆ. ಹತ್ತಾರು ಸಾವಿರ ಕೇರಳಿಗ ಭಕ್ತರು ಈ ರಥೋತ್ಸವದಲ್ಲಿ ಭಾಗವಹಿಸುತ್ತಾರೆ. ನಡುಗುವ ಚಳಿಯಲ್ಲಿ ದೇವಿಯ ರಥಬೀದಿಯಲ್ಲಿ ಕುಳಿತು ಮುಂಜಾನೆಯವರೆಗೂ ಜಾಗರಣೆ ಮಾಡುತ್ತಾರೆ. ಅಲ್ಲೊಂದು ಮಿನಿ ಕೇರಳವೇ ಸೃಷ್ಟಿಯಾಗಿರುತ್ತದೆ.
5000ಕ್ಕೂ ಮಿಕ್ಕಿ ಮಕ್ಕಳು: ವಿಜಯದಶಮಿಯಂದು ದೇವಾಲಯದ ಸರಸ್ವತಿ ಮಂಟಪದ ಮುಂಭಾಗದಲ್ಲಿ ಸಾಲಾಗಿ ಹೆತ್ತವರ ತೊಡೆಯ ಮೇಲೆ ಕುಳಿತ ಎಳೆಯ ಮಕ್ಕಳಿಗೆ ವಿದ್ಯಾರಂಭ ಮಾಡಿಸಲಾಗುತ್ತದೆ. ಸೋಮವಾರ ಈ ವಿದ್ಯಾರಂಭದಲ್ಲಿ 5000ಕ್ಕೂ ಹೆಚ್ಚು ಮಕ್ಕಳು ಭಾಗವಹಿಸಿದ್ದರು. ಇದರಲ್ಲಿ ಬಹುತೇಕ ಮಂದಿ ಕೇರಳಿಗರು. ವರ್ಷದಿಂದ ವರ್ಷಕ್ಕೆ ಈ ಸಂಪ್ರದಾಯದಲ್ಲಿ ಭಾಗವಹಿಸುವವರ ಸಂಖ್ಯೆ ಹೆಚ್ಚುತ್ತಿದೆ.
ಅರ್ಚಕರು ಚಿನ್ನದಿಂದ ಮಗುವಿನ ನಾಲಗೆಯ ಮೇಲೆ ಓಂ ಎಂದು ಬರೆಯುತ್ತಾರೆ, ನಂತರ ಹೆತ್ತವರು ಮಗುವಿನ ಬೆರಳಿಂದ ಅಕ್ಕಿ ತುಂಬಿದ ಹರಿವಾಣದಲ್ಲಿ ಓಂ ಬರೆಯುವ ಮೂಲಕ ಅಕ್ಷರಾಭ್ಯಾಸ ಯಾನೆ ವಿದ್ಯಾರಂಭ ಆರಂಭವಾಗುತ್ತದೆ.
ನವಾನ್ನಪ್ರಾಶನ: ಈ ದಿನ ಎಳೆಯ ಕಂದಮ್ಮಗಳಿಗೆ ಪ್ರಥಮ ಬಾರಿಗೆ ಅನ್ನ ತಿನ್ನಿಸುವ ನವಾನ್ನಪ್ರಾಶನ ಎಂಬ ಕ್ರಮ ಕೂಡ ಇಲ್ಲಿ ನಡೆಯುತ್ತದೆ. ಇಲ್ಲಿ ಅನ್ನಾಹಾರ ಆರಂಭಿಸಿದ ಮಗು ಮುಂದೆ ಯಾವುದೇ ರೀತಿಯ ಅನಾರೋಗ್ಯದಿಂದ ಬಳಲುವುದಿಲ್ಲ ಎಂಬುದು ನಂಬಿಕೆ. ನವರಾತ್ರಿಯ ಸಂದರ್ಭದಲ್ಲಿ ನಡೆಯುವ ದೇವಿಯ ಸೀರೆಗಳ ಹರಾಜು ಕೂಡ ಇಲ್ಲಿನ ಇನ್ನೊಂದು ವಿಶೇಷವಾಗಿದೆ. ಕೊಲ್ಲೂರು ದೇವಿಗೆ ಸೀರೆಗಳನ್ನು ಒಪ್ಪಿಸುವ ಹರಕೆ ಬಹಳ ಪ್ರಸಿದ್ಧ. ಇಂತಹ ಸೀರೆಗಳನ್ನು ನವರಾತ್ರಿಯ ದಿನಗಳಲ್ಲಿ ಹರಾಜು ಮಾಡಲಾಗುತ್ತದೆ. ದೇವಿಗೆ ಉಡಿಸಿದ ಈ ಸೀರೆಗಳನ್ನು ಮೂಲ ಬೆಲೆಗಿಂತಲೂ ಸಾವಿರಾರು ರುಪಾಯಿ ಹೆಚ್ಚುವರಿ ಕೊಟ್ಟು ಪಡೆದುಕೊಳ್ಳುವುದಕ್ಕೆ ಭಕ್ತರಲ್ಲಿ ಸ್ಪರ್ಧೆ ಏರ್ಪಡುತ್ತದೆ.
ನವರಾತ್ರಿಯ ಉತ್ಸವ ಮತ್ತು ವಿಜಯದಶಮಿಯ ಎಲ್ಲ ಕಾರ್ಯಕ್ರಮಗಳು ದೇವಳದ ವ್ಯವಸ್ಥಾಪನ ಸಮಿತಿ ಅಧ್ಯಕ್ಷರಾದ ಕೃಷ್ಣಪ್ರಸಾದ ಅಡ್ಯಂತಾಯ ಅವರ ನೇತೃತ್ವದಲ್ಲಿ ಸಾಂಗವಾಗಿ ನೆರವೇರಿದವು. ಈ ದಿನಗಳಲ್ಲಿ ಲಕ್ಷಕ್ಕೂ ಅಧಿಕ ಮಂದಿ ದೇವಾಲಯಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ್ದಾರೆ.