'ಜೀವನದಲ್ಲಿ ಸತ್ಯ, ಧರ್ಮ ಪ್ರಧಾನ'
ಉಡುಪಿ: ಮನುಷ್ಯನ ಜೀವನದ ಉನ್ನತಿಯಲ್ಲಿ ಸತ್ಯ, ಧರ್ಮ, ನ್ಯಾಯ ಪ್ರಧಾನ ಪಾತ್ರ ವಹಿಸುತ್ತವೆ. ಉಪದೇಶ ಪೂರ್ವಕ ನೀಡಿದ ತಿಳುವಳಿಕೆಯನ್ನು ಜೀವನದಲ್ಲಿ ಅನುಷ್ಠಾನ ಮಾಡಬೇಕು ಎಂದು ಶ್ರೀಕ್ಷೇತ್ರ ಬಂಟಕಲ್ಲು ಶ್ರೀದುರ್ಗಾಪರಮೆಶ್ವರಿ ದೇವಳದ ಹಿರಿಯ ಅರ್ಚಕ ವೇದಮೂರ್ತಿ ಕೆ. ವೇದವ್ಯಾಸರಾಯ ಭಟ್ ಹೇಳಿದರು.
ಅವರು ಸೋಮವಾರ ಶ್ರೀಕ್ಷೇತ್ರ ಅಡಪಾಡಿ ಶ್ರೀಉಮಾಮಹೇಶ್ವರ, ಶ್ರೀದುರ್ಗಾಪರಮೆಶ್ವರಿ ದೇವಳದಲ್ಲಿ ರಾಜಾಪುರ ಸಾರಸ್ವತ ಬ್ರಾಹ್ಮಣ ಸಂಘ ಪಳ್ಳಿ ಮತ್ತು ಶ್ರೀಕ್ಷೇತ್ರದ ಸಂಯುಕ್ತ ಆಶ್ರಯದಲ್ಲಿ ಶರನ್ನವರಾತ್ರಿ ಅಂಗವಾಗಿ 7 ದಿನಗಳ ಕಾಲ ಜರುಗಿದ ಸಂಧ್ಯಾವಂದನಾ ಮತ್ತು ವ್ಯಕ್ತಿತ್ವ ವಿಕಸನ ಶಿಬಿರದ ಸಮರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು. ಸಭಾಧ್ಯಕ್ಷತೆಯನ್ನು ಶ್ರೀಸಂಸ್ಥಾನ ಗೌಡ ಪಾದಾಚಾರ್ಯ ಕೈವಲ್ಯಮಠದ ವ್ಯವಸ್ಥಾಪಕ ವೇದಮೂರ್ತಿ ಉದಯ ಪ್ರಭು ವಹಿಸಿದ್ದರು. ಶಿಬಿರದ ವೈದಿಕ ಗುರೂಜಿ ವೇದಮೂರ್ತಿ ಮುಗೇಶ್ ಭಟ್, ಶಿಬಿರಾಧಿಕಾರಿ ಸದಾಶಿವ ನಾಯಕ್ ವಿಟ್ಲ, ಕಾರ್ಕಳ ಶ್ರೀಭುವನೇಂದ್ರ ಕಾಲೇಜಿನ ಪ್ರಾಂಶುಪಾಲ ವೈ. ಪಾಂಡುರಂಗ ನಾಯಕ್, ಮಣಿಪಾಲ ನರಸಿಂಗೆ ದೇವಳದ ಅಧ್ಯಕ್ಷ ಆನಂದ ನಾಯಕ್, ಬಾಬಣ್ಣ ವಾಗ್ಲೆ ಹಿರ್ಗಾನ, ಕಡಾರಿ ರವೀಂದ್ರ ಪ್ರಭು, ರಾಜಾರಾಮ ನಾಯಕ್ ಉಪಸ್ಥಿತರಿದ್ದರು. ಚಿತ್ರಕಲಾ ಸ್ಪರ್ಧೆಯಲ್ಲಿ ರಾಷ್ಟ್ರಮಟ್ಟದ ಸಾಧನೆ ಮಾಡಿದ ಬಾಲಪ್ರತಿಭೆ ಶ್ರೀರಕ್ಷಾ ಮಂಗಳೂರು ಇವರನ್ನು ಸನ್ಮಾನಿಸಲಾಯಿತು.