ಪುತ್ತೂರಲ್ಲಿ ಬೃಹತ್ 'ನಮೋ ರ್ಯಾಲಿ'
ಪುತ್ತೂರು: ದೇಶದ ಮೇಲೆ ನಿರಂತರ ದಾಳಿ ನಡೆಯುತ್ತಿದ್ದರೂ ಕೂಡ ಯಾವುದೇ ಪ್ರತಿಕ್ರಿಯೆ ನೀಡದೆ ರೋಬೋಟ್‌ನಂತಿರುವ ಪ್ರಧಾನಿ ನಮಗೆ ಬೇಕಾಗಿಲ್ಲ. ಪ್ರತಿಯೊಂದು ಘಟನೆಗೂ ಕೂಡ ಸೂಕ್ತ ರೀತಿಯಲ್ಲಿ ಉತ್ತರಿಸುವ, ಸಿಂಹದಂತೆ ಗರ್ಜಿಸುವ ನಾಯಕ ಬೇಕು ಎಂದು ಉಪನ್ಯಾಸಕ ಆದರ್ಶ ಗೋಖಲೆ ಹೇಳಿದ್ದಾರೆ.
ಪುತ್ತೂರು ನಮೋ ಭಾರತ್ ಸಂಘಟನೆ ಶನಿವಾರ ಹಮ್ಮಿಕೊಂಡ ಬೃಹತ್ ವಾಹನ ರ್ಯಾಲಿ ಹಾಗೂ ಕಿಲ್ಲೆ ಮೈದಾನದಲ್ಲಿ ನಡೆದ ಸಭಾ ಕಾರ್ಯಕ್ರಮ ಉದ್ಘಾಟಿಸಿ ಅವರು ದಿಕ್ಸೂಚಿ ಭಾಷಣ ಮಾಡಿದರು.
'ಈಟ್ ಇಂಡಿಯಾ ಕಂಪನಿ': ದೇಶವನ್ನು ಈ ಹಿಂದೆ ಆಳಿದ ವಿವಿಧ ರಾಜರು, ಬಳಿಕ ಈಸ್ಟ್ ಇಂಡಿಯಾ ಕಂಪನಿ ಕೂಡ ದೇಶವನ್ನು ದೋಚಿತ್ತು. ಬಳಿಕ ಆಡಳಿತ ನಡೆಸಿದ ಕಾಂಗ್ರೆಸ್ ನೇತೃತ್ವದ 'ಈಟ್ ಇಂಡಿಯಾ ಕಂಪನಿ' ದೇಶವನ್ನೇ ವಿವಿಧ ಹಗರಣಗಳ ಮೂಲಕ ಕೊಳ್ಳೆ ಹೊಡೆದಿದೆ. ಹೀಗಾಗಿ ಇಂದು ಕಾಂಗ್ರೆಸ್‌ಗೆ ವಿದಾಯ ಹೇಳಿ ದೇಶಭಕ್ತ ನರೇಂದ್ರ ಮೋದಿ ಅವರನ್ನು ಪ್ರಧಾನಿಯನ್ನಾಗಿಸಬೇಕಿದೆ ಎಂದು ಗೋಖಲೆ ಹೇಳಿದರು.
ಮುಖ್ಯ ಅತಿಥಿ, ನ್ಯಾಯವಾದಿ ಪಿ.ಪಿ. ಹೆಗ್ಡೆ ಮಾತನಾಡಿ, ಗಾಂಧೀಜಿ ಅವರಿಗೆ ಕಾಂಗ್ರೆಸ್‌ನ್ನು ವಿಸರ್ಜನೆ ಮಾಡಲು ಮನಸ್ಸಿತ್ತು, ಆದರೆ ಈಗ ಅವರದೇ ಊರಿನ ನರೇಂದ್ರ ಮೋದಿ ದೇಶದಿಂದಲೇ ಕಾಂಗ್ರೆಸ್ ವಿಸರ್ಜಿಸುವ ಕೆಲಸ ಮಾಡಲಿದ್ದಾರೆ. ಅದಕ್ಕೆ ಎಲ್ಲರ ಬೆಂಬಲವೂ ಬೇಕಾಗಿದೆ ಎಂದರು.
ನಮೋಭಾರತ ಸಂಘಟನೆ ಗೌರವಾಧ್ಯಕ್ಷ ಡಾ.ಎಂ.ಕೆ. ಪ್ರಸಾದ್ ಮಾತನಾಡಿದರು. ಅಧ್ಯಕ್ಷ ಅರುಣ್ ಕುಮಾರ್ ಪುತ್ತಿಲ, ಸವಿತಾ ಸಮಾಜದ ಅಧ್ಯಕ್ಷ ಕೇಶವ ಭಂಡಾರಿ ಇದ್ದರು. ಸಂಜೀವ ಕೂರೇಲು ಅಧ್ಯಕ್ಷತೆ ವಹಿಸಿದ್ದರು. ನಮೋ ಭಾರತ ಸಂಘಟನೆ ಸಂಚಾಲಕ ಅಜಿತ್ ರೈ ಹೊಸಮನೆ ಸ್ವಾಗತಿಸಿದರು.
ಸಭಾ ಕಾರ್ಯಕ್ರಮಕ್ಕೆ ಮುನ್ನ ನೆಹರು ನಗರದಿಂದ ದರ್ಬೆ ವೃತ್ತದ ಮೂಲಕ ಕೋರ್ಟ್ ಮೈದಾನವರೆಗೆ ವಾಹನ ರ್ಯಾಲಿ ನಡೆಯಿತು.