ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಉಡುಪಿ

ಪುತ್ತೂರು: 29ರಂದು ಅಡಕೆ ಬೆಳೆಗಾರರ ಪ್ರತಿಭಟನೆ

Mainashree
Updated On : 20 Oct 2013, 11:20 am

ಪುತ್ತೂರು: ರಾಜ್ಯ ಸರ್ಕಾರವು ಅಡಕೆ ಕೊಳೆರೋಗ ಪೀಡಿತರಿಗೆ ಸಮರ್ಪಕ ಪರಿಹಾರ ನೀಡದೆ ರೈತರ ಕಣ್ಣೊರೆಸುವ ತಂತ್ರ ನಡೆಸುತ್ತಿದೆ. ಈ ಹಿನ್ನೆಯಲ್ಲಿ  ಸರ್ಕಾರಕ್ಕೆ ಎಚ್ಚರ ಮೂಡಿಸುವ ಉದ್ದೇಶದಿಂದ 29ರಂದು ಪುತ್ತೂರಿನಲ್ಲಿ ಕೊಳೆರೋಗ ಪೀಡಿತ ಅಡಕೆ ಬೆಳೆಗಾರ ರೈತರ ಜಿಲ್ಲಾ ಮಟ್ಟದ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಂಜೀವ ಮಠಂದೂರು ಹೇಳಿದರು.
ಅವರು ಶನಿವಾರ ಪುತ್ತೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ತೋಟಗಾರಿಕಾ ಇಲಾಖೆಯ ನಿರ್ದೇಶಕರು ನೀಡಿದ ಸಮೀಕ್ಷಾ ಮಾಹಿತಿಯಂತೆ ಜಿಲ್ಲೆಯಲ್ಲಿ ಅಡಕೆ ಕೊಳೆರೋಗದಿಂದ ರು. 437 ಕೋಟಿ ನಷ್ಟವಾಗಿರುವುದಾಗಿ ತಿಳಿಸಿದ್ದಾರೆ. ನಷ್ಟ ಪೀಡಿತ ಅಡಕೆ ಬೆಳೆಗಾರರಿಗೆ ತಲಾ ಹೆಕ್ಟೇರ್‌ಗೆ ರು. 12 ಸಾವಿರ ನೀಡುವುದಾಗಿ ಘೋಷಿಸಿರುವ ಸರ್ಕಾರವು ಅದನ್ನು ನೀಡದೆ ಮೋಸ ಮಾಡಿದೆ. ಇದೆಲ್ಲಾ ಸರ್ಕಾರದ ರಾಜಕೀಯ ತಂತ್ರಗಾರಿಕೆಯಾಗಿದೆ. ಇದರೊಂದಿಗೆ ಕೊಳೆರೋಗ ಪೀಡಿತ ರೈತರಿಗೆ ಶಾಶ್ವತ ಪರಿಹಾರ ನೀಡಬೇಕು. ಪರಿಹಾರ ಮಾನದಂಡವನ್ನು ಬದಲಾಯಿಸಬೇಕು. ಕುಮ್ಕಿ, ಪರಂಬೋಕು ಮತ್ತು ಸರ್ಕಾರಿ ಜಮೀನಿನಲ್ಲಿರುವ ರೈತರಿಗೂ ಪರಿಹಾರ ವಿತರಿಸಬೇಕು ಎಂದು ಪ್ರತಿಭಟನೆಯಲ್ಲಿ ಆಗ್ರಹಿಸಲಾಗುವುದು ಎಂದು ತಿಳಿಸಿದರು.
ಪುತ್ತೂರಿನ ಕಿಲ್ಲೆ ಮೈದಾನದಲ್ಲಿ ನಡೆಯಲಿರುವ ಪ್ರತಿಭಟನಾ ಸಭೆಯಲ್ಲಿ ಡಿ.ವಿ. ಸದಾನಂದ ಗೌಡ, ಈಶ್ವರಪ್ಪ, ರಾಜ್ಯ ಬಿಜೆಪಿ ಅಧ್ಯಕ್ಷ ಪ್ರಹ್ಲಾದ್ ಜೋಷಿ, ಅರಗಜ್ಞಾನೇಂದ್ರ, ಜಿಲ್ಲಾ ಬಿಜೆಪಿ ಅಧ್ಯಕ್ಷ ಪ್ರತಾಪಸಿಂಹ ನಾಯಕ್, ಮಾಜಿ ಸಚಿವ ನಾಗರಾಜ ಶೆಟ್ಟಿ, ಸಂಸದ ನಳಿನ್ ಕುಮಾರ್ ಕಟೀಲು, ಶಾಸಕ ಅಂಗಾರ, ವಿಧಾನ ಪರಿಷತ್ ಸದಸ್ಯ ಗಣೇಶ ಕಾರ್ಣಿಕ್ ಮತ್ತು ಮೋನಪ್ಪ ಭಂಡಾರಿ ಭಾಗವಹಿಸಲಿದ್ದಾರೆ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾ ಉಪಾಧ್ಯಕ್ಷರಾದ ಬೂಡಿಯಾರು ರಾಧಾಕೃಷ್ಣ ರೈ, ಕೆ.ಟಿ. ಶೈಲಜಾ ಭಟ್, ಜಿಲ್ಲಾ ಸಮಿತಿ ಸದಸ್ಯ ಆರ್.ಸಿ. ನಾರಾಯಣ, ರೈತ ಮೋರ್ಚಾ ಮುಖಂಡ ಸುರೇಶ್ ಆಳ್ವ ಮತ್ತಿತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement