'ಭವದ್ಗೀತಾಮೃತ ಚೈತನ್ಯ ಸ್ತೋತ್ರಮ್' ಬಿಡುಗಡೆ
ಉಡುಪಿ: ಆಧ್ಯಾತ್ಮಿಕ ವಿದ್ಯೆಯೇ ಶ್ರೇಷ್ಠ ವಿದ್ಯೆ. ಜಪ, ತಪ ಅನುಷ್ಠಾನದಿಂದ ಜ್ಞಾಪಕಶಕ್ತಿ ವೃದ್ಧಿಸುತ್ತದೆ. ಸುಜ್ಞಾನದಿಂದ ದೇಹದಲ್ಲಿ ದೈವತ್ವ ಪ್ರಾಪ್ತವಾಗುತ್ತದೆ. ಜ್ಞಾನದಾಹದ ಭಕ್ತಿಯಿಂದ ಜೀವನದಲ್ಲಿ ಉನ್ನತಿಯಾಗುತ್ತದೆ ಎಂದು ಶ್ರೀಕ್ಷೇತ್ರ ಕೇಮಾರು ಸಾಂದೀಪನಿ ಸಾಧನಾಶ್ರಮದ ಶ್ರೀ ಈಶವಿಠಲದಾಸ ಸ್ವಾಮೀಜಿ ಹೇಳಿದ್ದಾರೆ.
ಕುತ್ಯಾರು ಶ್ರೀಪರಶುರಾಮೇಶ್ವರ ಕ್ಷೇತ್ರದ ಸೂರ್ಯ ಚೈತನ್ಯ ಮೊಂಟೆಸ್ಸರಿ ಶಾಲೆ ವಠಾರದಲ್ಲಿ 'ಭಗವದ್ಗೀತಾಮೃತ ಚೈತನ್ಯ ಸ್ತೋತ್ರಮ್' ಪುಸ್ತಕ ಬಿಡುಗಡೆ ಸಮಾರಂಭದ ಸಾನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು. ಮೂಲ್ಕಿ ವಿಜಯಾ ಕಾಲೇಜು ಪ್ರಾಂಶುಪಾಲ ಡಾ. ಶಂಕರ್ ಪುಸ್ತಕ ಬಿಡುಗಡೆ ಮಾಡಿದರು. ಶಿರ್ವ ಸಾರ್ವಜನಿಕ ಗಣೇಶೋತ್ಸವ ಸಮಿತಿ ಅಧ್ಯಕ್ಷ ಕೆ. ಸುಂದರ ಪ್ರಭು ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಬ್ರಹ್ಮಶ್ರೀ ನಾರಾಯಣಗುರು ಸೇವಾ ಸಮಿತಿ ಅಧ್ಯಕ್ಷ ಪ್ರಕಾಶ್ ಪಾಲಮೆ, ಪಡುಬಿದ್ರಿಯ ವೈದ್ಯ ಡಾ.ಎನ್.ಟಿ. ಅಂಚನ್, ಕಾಪು ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ನವೀನ್‌ಚಂದ್ರ ಜೆ. ಶೆಟ್ಟಿ ಇದ್ದರು.
ಶಿಕ್ಷಕ ಬಿ. ಪುಂಡಲೀಕ ಮರಾಠೆ ಪುಸ್ತಕ ಪರಿಚಯ ಮಾಡಿದರು. ಶ್ರೀಕ್ಷೇತ್ರದ ಧರ್ಮದರ್ಶಿ ವಿದ್ವಾನ್ ಶಂಭುದಾಸ್ ಗುರೂಜಿ ಸ್ವಾಗತಿಸಿದರು. ಜ್ಯೋತಿ ವಂದಿಸಿದರು. ಈ ಸಂದರ್ಭ ಕಳತ್ತೂರು ವೇದಮೂರ್ತಿ ಕರುಣಾಕರ ತಂತ್ರಿ ದಂಪತಿಯನ್ನು ಸನ್ಮಾನಿಸಲಾಯಿತು.