ಕಟಪಾಡಿ: ಕಾರ್ಪ್ ಬ್ಯಾಂಕ್ ಎಟಿಎಂ ಉದ್ಘಾಟನೆ
ಕಟಪಾಡಿ: ಇಲ್ಲಿನ ಕಾರ್ಪೋರೇಶನ್ ಬ್ಯಾಂಕ್ನ ಶಾಖೆಯ ಪ್ರಥಮ ವಾರ್ಷಿಕೋತ್ಸವದ ಸಂದರ್ಭದಲ್ಲಿ ಸ್ಥಳೀಯ ನಾಗರಿಕರ ಬಹುಬೇಡಿಕೆಯ ಎಟಿಎಂ ಸೌಲಭ್ಯವನ್ನು ಸ್ಥಳೀಯ ಹಿರಿಯ ನಾಗರಿಕರಾದ ಕೋಟೆ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ದಯಾನಂದ ವಿ. ಬಂಗೇರ ಉದ್ಘಾಟಿಸಿದರು.
ನಂತರ ನಡೆದ ಬ್ಯಾಂಕಿನ ಗ್ರಾಹಕರ ಸಮಾವೇಶವನ್ನು ಉದ್ದೇಶಿಸಿದ ಮಾತನಾಡಿದ ಉಡುಪಿ ವಲಯ ಕಚೇರಿಯ ಸಹಾಯಕ ಮಹಾಪ್ರಬಂಧಕ ಮಂಜುನಾಥ ಶೆಣೈ, ಕಾರ್ಪೋರೇಶನ್ ಬ್ಯಾಂಕಿನ ವಿವಿಧ ಹೊಸ ಸೇವಾ ಸೌಲಭ್ಯಗಳ ಮಾಹಿತಿಯನ್ನು ನೀಡಿದರು. ಇನ್ನೂ ಉತ್ತಮ ಸೇವೆಯನ್ನು ನೀಡುವುದಕ್ಕಾಗಿ ಗ್ರಾಹಕರಿಂದ ಸಲಹೆಗಳನ್ನು ಸ್ವೀಕರಿಸಿ, ಅವುಗಳನ್ನು ಈಡೇರಿಸಲು ಬ್ಯಾಂಕ್ ಕಂಕಣಬದ್ಧವಾಗಿದೆ ಎಂದರು.
ಕಟಪಾಡಿ ಶಾಖಾ ಪ್ರಬಂಧಕಿ ಸಂಧ್ಯಾ ಬೋಳ್ವಾರ್ ಸ್ವಾಗತಿಸಿ, ಬ್ಯಾಂಕಿನ ಒಂದು ವರ್ಷದ ಸಾಧನೆಗಳನ್ನು ವಿವರಿಸಿದರು. ವಿವಿಧ ಸೌಲಭ್ಯಗಳ ಪ್ರಥಮ ಗ್ರಾಹಕರನ್ನು ಗುರುತಿಸಿ ಗೌರವಿಸಿ, ವಂದಿಸಿದರು.