ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಉಡುಪಿ

ವಿದ್ಯಾರ್ಥಿಗಳಿಗೆ ಪ್ರಜಾಪ್ರಭುತ್ವ ಮಾಹಿತಿ ಅಗತ್ಯ: ಪ್ರಮೋದ್ ಮಧ್ವರಾಜ್

Rashmi Kasaragodu
Updated On : 23 Oct 2013, 11:35 am

ಉಡುಪಿ: ದೇಶದಲ್ಲಿ ಪ್ರಜಾಪ್ರಭುತ್ವ ಉಳಿಯಬೇಕಾದರೆ ಜನ ಸದಾ ಜಾಗೃತರಾಗಿರುವುದು ಅತ್ಯಗತ್ಯ, ಅದಕ್ಕಾಗಿ ಶಾಲಾ ಹಂತದಲ್ಲಿಯೇ ವಿದ್ಯಾರ್ಥಿಗಳಿಗೆ ಪ್ರಜಾಪ್ರಭುತ್ವ, ಸರ್ಕಾರ, ವ್ಯವಸ್ಥೆ, ಮತದಾನ, ಜನ ಪ್ರತಿನಿಧಿಗಳ ಆಯ್ಕೆ ಕುರಿತು ಸರಿಯಾದ ಮಾಹಿತಿ ನೀಡಬೇಕು, ಆಗ ಮಾತ್ರ ಈ ಮಕ್ಕಳು ಮುಂದೆ ಜವಾಬ್ದಾರಿಯುತ ಪ್ರಜೆಗಳಾಗಿ ದೇಶವನ್ನು ಸರಿಯಾದ ದಾರಿಯಲ್ಲಿ ಮುನ್ನಡೆಸಲು ಸಾಧ್ಯವಾಗುತ್ತದೆ ಎಂದು ಉಡುಪಿ ಶಾಸಕ ಪ್ರಮೋದ್ ಮಧ್ವರಾಜ್ ಅಭಿಪ್ರಾಯಪಟ್ಟಿದ್ದಾರೆ.
ಅವರು ಮಂಗಳವಾರ ಬ್ರಹ್ಮಗಿರಿಯ ಬಾಲಭವನದಲ್ಲಿ ಬೆಂಗಳೂರು ಮಕ್ಕಳ ಹಕ್ಕುಗಳ ನಿಗಾ ಕೇಂದ್ರ, ಜಿಲ್ಲಾ ಶಿಕ್ಷಣ ಸಂಪನ್ಮೂಲ ಕೇಂದ್ರ, ಮಂಗಳೂರು ಪಡಿ ವೆಲೊರೆಡ್ ಆಶ್ರಯದಲ್ಲಿ ಆಯೋಜಿಸಲಾದ ಜಿಲ್ಲಾಮಟ್ಟದ ಮಕ್ಕಳ ಸಂಸತ್ತು ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.
ಮಕ್ಕಳ ಹಕ್ಕುಗಳ ನಿಗಾ ಕೇಂದ್ರದ ಪ್ರಸನ್ನ ರಾವ್ ಮಾತನಾಡಿ, 2012ರಲ್ಲಿ ರಾಜ್ಯ ವಿಧಾನಸಭೆಯಲ್ಲಿ ಶಾಸಕರು ಒಟ್ಟು 3,000 ಪ್ರಶ್ನೆಗಳನ್ನು ಕೇಳಿದ್ದಾರೆ. ಅದರಲ್ಲಿ 99 ಪ್ರಶ್ನೆಗಳು ಮಾತ್ರ ಮಕ್ಕಳಿಗೆ ಸಂಬಂಧಿಸಿದ್ದಾಗಿತ್ತು. ರಾಜ್ಯದ ಒಟ್ಟು ಜನಸಂಖ್ಯೆಯಲ್ಲಿ ಶೇ.44ರಷ್ಟಿರುವ ಮಕ್ಕಳ ಬಗ್ಗೆ ಕೇಳಿರುವ ಪ್ರಶ್ನೆ ಮಾತ್ರ ಶೇ.3 ಮಾತ್ರ. ಆದುದರಿಂದ ಮಕ್ಕಳಿಂದ ಪ್ರಶ್ನೆಗಳನ್ನು ಕೇಳಲು ಮಕ್ಕಳ ಸಂಸತ್ ಅಗತ್ಯ ಎಂದು ತಿಳಿಸಿದರು.
ಮುಖ್ಯ ಅತಿಥಿಗಳಾಗಿ ಶಿಕ್ಷಣಾಧಿಕಾರಿ ಅಶೋಕ್ ಕಾಮತ್, ವಳಕಾಡು ಶಾಲೆಯ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಅಮೃತ್ ಶೆಣೈ, ಪಡಿ ನಿರ್ದೇಶಕ ರೆನ್ನಿ ಡಿಸೋಜ, ಶಿಶು ಕಲ್ಯಾಣ ಯೋಜನಾಧಿಕಾರಿ ಸದಾನಂದ ನಾಯಕ್, ರೋಟರಿ ಅಧ್ಯಕ್ಷ ಯು.ಕೆ. ಭಾಸ್ಕರ್ ಇದ್ದರು.
ಜಿಲ್ಲಾ ಶಿಕ್ಷಣ ಸಂಪನ್ಮೂಲ ಕೇಂದ್ರದ ಅಧ್ಯಕ್ಷ ಜನಾರ್ದನ ಭಂಡಾರ್ಕರ್ ಸ್ವಾಗತಿಸಿದರು. ಉಪಾಧ್ಯಕ್ಷ ದಿಲೀಪ್ ಹೆಗ್ಡೆ ವಂದಿಸಿದರು.
ಜಯಕರ ಕರ್ಕೇರ ಕಾರ್ಯಕ್ರಮ ನಿರೂಪಿಸಿದರು.
ಬಳಿಕ ಕರ್ನಾಟಕ ವಿಧಾನಸಭೆ, ವಿಧಾನ ಪರಿಷತ್ಗೆ ಮಕ್ಕಳ ಪ್ರಶ್ನೆ, ಅಭಿಪ್ರಾಯ, ಬೇಡಿಕೆಗಳನ್ನು ಮಕ್ಕಳ ಸಂಸತ್ ಮೂಲಕ ಮುಂದಿಡಲಾಯಿತು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement