ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಉಡುಪಿ

ಅನಾಥೆಯ ಕೈ ಹಿಡಿದ ಯುವಕ

Rashmi Kasaragodu
Updated On : 24 Oct 2013, 11:53 am

ಕುಂದಾಪುರ: ಯುವಕನೊಬ್ಬ ಇಲ್ಲಿನ ಸ್ಫೂರ್ತಿಧಾಮದಲ್ಲಿ ಬೆಳೆದ ಹುಡುಗಿಯೊಬ್ಬಳ ಕೈ ಹಿಡಿದು ಆದರ್ಶವಾಗಿದ್ದಾನೆ.
8 ವರ್ಷದ ಹಿಂದೆ ತಬ್ಬಲಿಯಾಗಿ ಕುಂದಾಪುರ ಸ್ಫೂರ್ತಿಧಾಮ ಸೇರಿದ ಹುಡುಗಿ ಪೂಜಾ (20) ಹಾಗೂ ಗೌರಿ ಬಿದನೂರಿನ ವೆಂಕಟೇಶ್ ಕಾಮತ್ (29) ಕುಂದಾಪುರ ಉಪನೋಂದಾವಣಾಧಿಕಾರಿ ಕಚೇರಿಯಲ್ಲಿ ಕಾನೂನು ರೀತಿಯಲ್ಲಿ ಸತಿಪತಿಗಳಾದರು.
ಉಡುಪಿ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಯಿಂದ ಸ್ಫೂರ್ತಿಧಾಮದ ಮಕ್ಕಳ ಆಶ್ರಮಕ್ಕೆ 8 ವರ್ಷದ ಹಿಂದೆ ದಾಖಲಾದ ಪೂಜಾ ಎಂಟು ವರ್ಷದಲ್ಲಿ 5ನೇ ತರಗತಿಯಿಂದ 7ನೇ ತರಗತಿ, 7ರಿಂದ ನೇರ 10ನೇ ತರಗತಿ ವಿದ್ಯಾಭ್ಯಾಸ ಪಡೆದು, ಈಗ ದ್ವಿತೀಯ ಪಿಯುಸಿ ವಿದ್ಯಾರ್ಥಿನಿ. ಆಗಲೇ ಕಂಕಣ ಭಾಗ್ಯವೂ ಕೂಡಿ ಬಂತು.
ಜೀವನದಲ್ಲಿ ಆದರ್ಶ ಮೆರೆಯಬೇಕು ಎಂದು ಹಂಬಲಿಸುತ್ತಾ ಬಂದ ಹೆಣ್ಣುಗಳನ್ನೆಲ್ಲಾ ತಿರಸ್ಕರಿಸುತ್ತಾ ನಿಂತ ಪದವೀಧರ ಲ್ಯಾಬ್ ಟೆಕ್ನಿಷಿಯನ್ ಕೋರ್ಸ್ ಮುಗಿಸಿ ಗೌರಿಬಿದನೂರಿನಲ್ಲಿ ನೆಲೆಸಿರುವ ವೆಂಕಟೇಶ ಕಾಮತ್ಗೆ ಪೂಜಾ ಸರಿಯಾದ ಜೋಡಿ ಎಂದು ಕಂಡಿತು.
ತಾಯಿ ಇಲ್ಲದ ಕ್ಯಾನ್ಸರ್ನಿಂದ ಬಳಲುತ್ತಿದ್ದ ತಂದೆಗೆ ಆಸರೆಯಾಗಿ ನಿಂತ ಒಬ್ಬನೇ ಮಗನಾದ ವೆಂಕಟೇಶ ಕಾಮತ್ನ ಆಸೆಗೆ ತಕ್ಕಂತೆ ಹೆಣ್ಣು ನೋಡುವ ಜವಾಬ್ದಾರಿ ಅತ್ತೆಯವರದ್ದಾಗಿತ್ತು. ಸ್ಫೂರ್ತಿಧಾಮದ ಮುಖ್ಯ ಕಾರ್ಯನಿರ್ವಾಹಕರಾದ ಡಾ. ಕೇಶವ ಕೋಟೇಶ್ವ ಅವರನ್ನು ಸಂಪರ್ಕಿಸಿ ಹೆಣ್ಣಿಗಾಗಿ ಮನವಿ ಸಲ್ಲಿಸಿದರು. ಎರಡೂ ಕಡೆಯವರಿಗೆ ಒಪ್ಪಿಗೆಯಾಯಿತು. ನಿಯಮಾನುಸಾರ ಕಾನೂನು ಬದ್ಧ ಮದುವೆಗೆ ಎರಡೂ ಕಡೆಯವರು ಒಪ್ಪಿ ಬುಧವಾರ ಸಾಕ್ಷಿಗಳ ಸಮ್ಮುಖದಲ್ಲಿ ಮದುವೆ ನಡೆದು ಹೋಯಿತು.
ಸಂಪ್ರದಾಯಕ್ಕಿಂತ ಕಾನೂನು ಮತ್ತು ಆರೋಗ್ಯಕ್ಕೆ ಬೆಲೆ ಕೊಟ್ಟು ತಿಂಗಳ ಹಿಂದೆಯೇ ಹುಡುಗ ಹಾಗೂ ಹುಡುಗಿಯ ಎಚ್.ಐ.ವಿ. ಪರೀಕ್ಷೆ ನಂತರ ಮದುವೆಗೆ ಅಂತಿಮ ರೂಪ ನೀಡಲಾಯಿತು ಎಂದು ಡಾ. ಕೋಟೇಶ್ವರ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement