ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಉಡುಪಿ

ನೃತ್ಯ, ಸಂಗೀತ, ವಿದ್ವತ್ ಪೂರ್ಣ ಕಲೆ ಯಕ್ಷಗಾನ

Rashmi Kasaragodu
Updated On : 24 Oct 2013, 11:53 am

ಮಂಗಳೂರು: ಯಕ್ಷಗಾನ ಕಲಾವಿದ ಡಾ.ಕೋಳ್ಯೂರು ರಾಮಚಂದ್ರ ರಾಯರಿಗೆ ಬುಧವಾರ ಕಲ್ಕೂರ ಪ್ರತಿಷ್ಠಾನ ವತಿಯಿಂದ ಪುರಭವನದಲ್ಲಿ ನಡೆದ ಸಮಾರಂಭದಲ್ಲಿ ಮಲ್ಪೆ ಶಂಕರನಾರಾಯಣ ಸಾಮಗ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಪುತ್ತಿಗೆ ಮಠಾಧೀಶ ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿ ಮಾತನಾಡಿ, ಭರತ ನಾಟ್ಯದಲ್ಲಿ ಮಾತಿಗೆ ಅವಕಾಶ ಇಲ್ಲ, ಪ್ರವಚನದಲ್ಲಿ ವಿದ್ವತ್ಗೆ ಅವಕಾಶ ಇದ್ದರೂ ಕಲಾವಿದನಿಗೆ ಅವಕಾಶ ಇಲ್ಲ. ಯಕ್ಷಗಾನದಲ್ಲಿ ಸಂಗೀತ, ನೃತ್ಯ, ವಿದ್ವತ್ ಸಹಿತ ನವರಸಗಳಿಗೆ ಅವಕಾಶ ಇದೆ. ಅಬಾಲ ವೃದ್ಧರಾದಿಯಾಗಿ ಎಲ್ಲರಿಗೂ ಮನೋರಂಜನೆ ಸಿಗುತ್ತದೆ. ಯಕ್ಷಗಾನ ಧಾರ್ಮಿಕವೂ ಹೌದು ಆದ್ದರಿಂದ ಯಕ್ಷಗಾನ ಪರಿಪೂರ್ಣ ಕಲೆ ಎಂದರು.
ಸಂತ ಭದ್ರಗಿರಿ ಅಚ್ಯುತ ದಾಸರು ಧಾರ್ಮಿಕ ಕ್ಷೇತ್ರದಲ್ಲಿ ಪುಣ್ಯಪ್ರದ ಸಾಧನೆ ಮಾಡಿದವರು. ಕ್ರಿಕೆಟ್ ಇತ್ಯಾದಿ ಆಟ ಇನ್ನಿತರ ಗಿನ್ನೆಸ್ ದಾಖಲೆಗಳು ಪುಣ್ಯಪ್ರದವಲ್ಲ. ಯಕ್ಷಗಾನ ದಿಗ್ಗಜರ ಮುಂದೆ ಅಚ್ಯುತದಾಸರಿಗೆ ಶ್ರದ್ಧಾಂಜಲಿ ಸಲ್ಲಿಕೆಯೂ ಯೋಗಾಯೋಗ ಎಂದರು.
'ಮಲ್ಪೆ ಶಂಕರಾನಾರಾಯಣ ಸಾಮಗರೊಂದಿಗೆ ಕೋಳ್ಯೂರು  ಯಕ್ಷಗಾನದಲ್ಲಿ  ಮಗನಾಗಿ, ಪತ್ನಿಯಾಗಿ ಕಲಾಸೇವೆಗೈದ ಹಿರಿಯ ಕಲಾವಿದ ಎಂದು ಅಭಿನಂದನೆ ಭಾಷಣ ಮಾಡಿದ ಯಕ್ಷಗಾನ ಅಕಾಡೆಮಿ ಮಾಜಿ ಅಧ್ಯಕ್ಷ ಕುಂಬ್ಳೆ ಸುಂದರ ರಾವ್ ಹೇಳಿದರು. ದೊಡ್ಡ ಸಾಮಗರು ಮೇಳದ ಚೌಕಿಯಲ್ಲಿದ್ದಾಗ ಎಲ್ಲರೂ ಗೌರವಿಸುತ್ತಿದ್ದರು. ಚೌಕಿಯೊಳಗೆ ಸುಸಂಸ್ಕೃತಿಯನ್ನು ಸಾಮಗರು ಪ್ರತಿಪಾದಿಸುತ್ತಿದ್ದರು ಎಂದು ಯಕ್ಷಗಾನ ಆಕಾಡೆಮಿ ನಿಕಟಪೂರ್ವ ಅಧ್ಯಕ್ಷ ಪ್ರೊ.ಎಂ.ಎಲ್. ಸಾಮಗ ಹೇಳಿದರು.
ಕೋಳ್ಯೂರು ರಾಮಚಂದ್ರ ರಾಯರು ಮಾತನಾಡಿ, ಕಲಾವಿದರು ಎಷ್ಟೇ ಬ್ಯುಸಿ ಇರಲಿ, ರಾಜಕೀಯ ಕಾರ್ಯಕ್ರಮಗಳೇ ಇರಲಿ ಒಪ್ಪಿಕೊಂಡ ಕಾರ್ಯಕ್ರಮಕ್ಕೆ ಗೈರಾಗಬಾರದು. ಇದರಿಂದ ಸಂಘಟಕರಿಗೆ ಮಾತ್ರವಲ್ಲ, ಕಲಾವಿದನನ್ನು ನೋಡಬೇಕೆಂದು ಬರುವ ಅಭಿಮಾನಿಗಳಿಗೂ ನಿರಾಸೆಯಾಗುತ್ತದೆ ಎಂದರು.
ಈ ಸಂದರ್ಭ ಕಲ್ಕೂರ ಸೇವಾಪ್ರಶಸ್ತಿಯನ್ನು ಹರೀಶ್ ಶೆಟ್ಟಿ ಮಾಡ ಅವರಿಗೆ ಪ್ರದಾನ ಮಾಡಲಾಯಿತು. ಸಂತ ಭದ್ರಗಿರಿ ಅಚ್ಚುತದಾಸರ ಭಾವಚಿತ್ರದ ಮುಂದೆ ಪುಷ್ಪಾರ್ಚನೆ ಮಾಡಿ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಪ್ರತಿಷ್ಠಾನ ಅಧ್ಯಕ್ಷ ಎಸ್.ಪ್ರದೀಪ್ ಕುಮಾರ್ ಕಲ್ಕೂರ ಅಧ್ಯಕ್ಷತೆ ವಹಿಸಿದ್ದರು. ಸಾಹಿತಿ ಜನಾರ್ದನ ಹಂದೆ, ಜಿ.ಕೆ.ಭಟ್ ಸೇರಾಜೆ, ಸುಧಾಕರ ರಾವ್ ಪೇಜಾವರ ಇದ್ದರು. ಕದ್ರಿ ನವನೀತ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.  


ಕಲಾವಿದರು ಎಷ್ಟೇ ಬ್ಯುಸಿ ಇರಲಿ, ರಾಜಕೀಯ ಕಾರ್ಯಕ್ರಮಗಳೇ ಇರಲಿ ಒಪ್ಪಿಕೊಂಡ ಕಾರ್ಯಕ್ರಮಕ್ಕೆ ಗೈರಾಗಬಾರದು. ಇದರಿಂದ ಸಂಘಟಕರಿಗೆ ಮಾತ್ರವಲ್ಲ, ಕಲಾವಿದನನ್ನು ನೋಡಬೇಕೆಂದು ಬರುವ ಅಭಿಮಾನಿಗಳಿಗೂ ನಿರಾಸೆಯಾಗುತ್ತದೆ.
 ಕೋಳ್ಯೂರು ರಾಮಚಂದ್ರ ರಾಯರು


ಸಂತ ಭದ್ರಗಿರಿ ಅಚ್ಯುತ ದಾಸರು ಧಾರ್ಮಿಕ ಕ್ಷೇತ್ರದಲ್ಲಿ ಪುಣ್ಯಪ್ರದ ಸಾಧನೆ ಮಾಡಿದವರು. ಕ್ರಿಕೆಟ್ ಇತ್ಯಾದಿ ಆಟ ಇನ್ನಿತರ ಗಿನ್ನೆಸ್ ದಾಖಲೆಗಳು ಪುಣ್ಯಪ್ರದವಲ್ಲ. ಯಕ್ಷಗಾನ ದಿಗ್ಗಜರ ಮುಂದೆ ಅಚ್ಯುತದಾಸರಿಗೆ ಶ್ರದ್ಧಾಂಜಲಿ ಸಲ್ಲಿಕೆಯೂ ಯೋಗಾಯೋಗ.
 ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement