ಬೆಳೆ ಹಾನಿ ಪರಿಹಾರಕ್ಕೆ ಯೋಜನೆ: ಸೊರಕೆ
ಮಣಿಪಾಲ: ಮಳೆಯಿಂದಾಗಿ ಜಿಲ್ಲೆಯ ಹಲವಾರು ಕಡೆಗಳಲ್ಲಿ ಬೆಳೆ ಹಾನಿಯಾಗಿದ್ದು, ಸರ್ಕಾರ ಅನೇಕ ರೀತಿಯ ಪರಿಹಾರ- ಸೌಲಭ್ಯ ಯೋಜನೆಗಳನ್ನು ಹಾಕಿಕೊಂಡಿದೆ. ಈ ಬಗ್ಗೆ ಕೃಷಿಕರಿಗೆ ಅರಿವು ಹಾಗೂ ತಿಳುವಳಿಕೆ ಅಗತ್ಯ. ಕೃಷಿ, ತೋಟಗಾರಿಕೆ ಮತ್ತಿತರ ಇಲಾಖೆ ಈ ಮಾಹಿತಿಯನ್ನು ನೀಡಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ವಿನಯ ಕುಮಾರ್ ಸೊರಕೆ ಅಭಿಪ್ರಾಯಪಟ್ಟಿದ್ದಾರೆ.
ಉಡುಪಿ ಕೃಷಿ ಇಲಾಖೆ, ತೋಟಗಾರಿಕೆ ಇಲಾಖೆ, ಪಶುಪಾಲನೆ ಮತ್ತು ಪಶುವೈದ್ಯಕೀಯ ಇಲಾಖೆ, ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ ಸಂಯುಕ್ತ ಆಶ್ರಯದಲ್ಲಿ ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣ ಸಭಾಂಗಣದಲ್ಲಿ ನಡೆದ ಆಹಾರ ಸಂಸ್ಕರಣೆ ಉದ್ದಿಮೆ ಸ್ಥಾಪಿಸಲು ಇರುವ ಅವಕಾಶಗಳ ಕುರಿತ ಜಿಲ್ಲಾ ಮಟ್ಟದ ಕಾರ್ಯಗಾರ ಉದ್ಘಾಟಿಸಿ ಅವರು ಮಾತನಾಡಿದರು.
ಕರಾವಳಿಯಲ್ಲಿ ಮೀನುಗಾರಿಕೆ ಪ್ರಧಾನವಾದ ವೃತ್ತಿಯಾಗಿದ್ದು, ಇದಕ್ಕೆ ಒತ್ತು ಕೊಡುವ ಕಾರ್ಯಕ್ರಮಗಳು ಹೆಚ್ಚಾಗಬೇಕು. ಜೊತೆಗೆ ತೆಂಗು ಬೆಳೆಗೂ ನ್ಯಾಯಯುತ ಬೆಲೆ ಒದಗಿಸುವ ಅವಶ್ಯಕತೆ ಇದೆ ಎಂದವರು ಹೇಳಿದರು.
ಜಿಪಂ ಅಧ್ಯಕ್ಷ ಉಪೇಂದ್ರ ನಾಯಕ್ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಜಿಲ್ಲಾಧಿಕಾರಿ ಡಾ.ಎಂ.ಟಿ. ರೇಜು, ವಿಧಾನ ಪರಿಷತ್ ಸದಸ್ಯ ಕೆ. ಪ್ರತಾಪ್ಚಂದ್ರ ಶೆಟ್ಟಿ, ಜಿಪಂ ಉಪಾಧ್ಯಕ್ಷೆ ಮಮತಾ ಆರ್. ಶೆಟ್ಟಿ, ನಗರಸಭೆ ಅಧ್ಯಕ್ಷ ಯುವರಾಜ್, ತಾಪಂ ಅಧ್ಯಕ್ಷೆ ಗೌರಿ ಪೂಜಾರಿ, ಉಪಾಧ್ಯಕ್ಷ ರಾಮ ಕುಲಾಲ್ ಇದ್ದರು.
ಈ ಸಂದರ್ಭ ರಾಷ್ಟ್ರೀಯ ಆಹಾರ ಸಂಸ್ಕರಣಾ ಅಭಿಯಾನ ಯೋಜನೆಯ ಪ್ರತಿಯನ್ನು ಬಿಡುಗಡೆಗೊಳಿಸಲಾಯಿತು. ನಂತರ ಆಹಾರ ಸುರಕ್ಷತೆಯ ನಿರ್ದಿಷ್ಟತೆಗಳು, ತೋಟಗಾರಿಕೆ ಬೆಳೆಗಳಲ್ಲಿ ಆಹಾರ ಸಂಸ್ಕರಣೆಗಿರುವ ಅವಕಾಶಗಳು, ಜಿಲ್ಲೆಯಲ್ಲಿ ಆಹಾರ ಸಂಸ್ಕರಣಾ ಉದ್ದಿಮೆ ಸ್ಥಾಪಿಸಲು ಇರುವ ಸಾಮರ್ಥ್ಯ ಹಾಗೂ ಅವಕಾಶಗಳು, ಆಹಾರ ಸಂಸ್ಕರಣಾ ಉತ್ತೇಜನ ಕಾರ್ಯಕ್ರಮದಲ್ಲಿ ವಾಣಿಜ್ಯ ಬ್ಯಾಂಕ್ ಹಾಗೂ ಹಣಕಾಸು ಸಂಸ್ಥೆಗಳ ಪಾತ್ರದ ಕುರಿತು ವಿಚಾರಗೋಷ್ಠಿ ನಡೆಯಿತು. ಕೃಷಿ ಇಲಾಖೆಯ ಅಧಿಕಾರಿ ಅಂಥೋನಿ ಸ್ವಾಗತಿಸಿದರು.