ಉಡುಪಿ; ನ.5ರಿಂದ ಚಿಟ್ಟಾಣಿ ಯಕ್ಷಗಾನ
ಉಡುಪಿ: ಚಿಟ್ಟಾಣಿ ಅಭಿಮಾನಿ ಬಳಗ ವತಿಯಿಂದ ಪರ್ಯಾಯ ಸೋದೆ ಮಠದ ಆಶ್ರಯದಲ್ಲಿ ನ.5ರಿಂದ 11ರವರೆಗೆ ಶ್ರೀಕಷ್ಣ ಮಠದ ರಾಜಾಂಗಣದಲ್ಲಿ ಚಿಟ್ಟಾಣಿ ಯಕ್ಷಗಾನ ಸಪ್ತಾಹ ನಡೆಯಲಿದೆ. ಸಂಘಟನೆಯ ಅಧ್ಯಕ್ಷ ತಲ್ಲೂರು ಶಿವರಾಮ ಶೆಟ್ಟಿ ಸುದ್ದಿಗೋಷ್ಠಿಯಲ್ಲಿ ಕಾರ್ಯಕ್ರಮ ಮಾಹಿತಿ ನೀಡಿ, ನ.5ರಂದು ಸಂಜೆ 6 ಗಂಟೆಗೆ ಪರ್ಯಾಯ ಶ್ರೀವಿಶ್ವವಲ್ಲಭತೀರ್ಥ ಸ್ವಾಮೀಜಿ ಸಪ್ತಾಹ ಉದ್ಘಾಟಿಸುವರು. ಸಚಿವ ವಿನಯಕುಮಾರ್ ಸೊರಕೆ, ಶಾಸಕ ಪ್ರಮೋದ್ ಮಧ್ವರಾಜ್, ಚೆನ್ನೈ ಕರ್ನಾಟಕ ಸಂಘದ ಅಧ್ಯಕ್ಷ ಪಿ. ನಾರಾಯಣ ಭಟ್ ಭಾಗವಹಿಸಲಿದ್ದಾರೆ ಎಂದರು. ನ.11ರಂದು ನಡೆಯುವ ಸಮಾರೋಪದಲ್ಲಿ ಪರ್ಯಾಯ ವಿಶ್ವವಲ್ಲಭತೀರ್ಥ ಶ್ರೀಪಾದರು 'ಪದ್ಮಶ್ರೀ ಚಿಟ್ಟಾಣಿ ರಾಮಚಂದ್ರ ಹೆಗಡೆ ಪ್ರಶಸ್ತಿ'ಯನ್ನು ಜಲವಳ್ಳಿ ವೆಂಕಟೇಶ್ ರಾವ್ ಹಾಗೂ 'ಟಿ.ವಿ. ರಾವ್ ಪ್ರಶಸ್ತಿ'ಯನ್ನು ಕೆ. ರಘುರಾಮ ಶೆಟ್ಟಿ ಅವರಿಗೆ ಪ್ರದಾನ ಮಾಡುವರು. ಕಾರ್ಯಕ್ರಮದಲ್ಲಿ ಪ್ರತಿದಿನ ಸಂಜೆ 6.30ರಿಂದ ಮಾಗದ ವಧೆ, ಶಲ್ಯಪರ್ವ-ಗದಾಪರ್ವ (ಪೂರ್ವಾರ್ಧ), ಗದಾಪರ್ವ-ರಕ್ತರಾತ್ರಿ, ಶನೈಶ್ಚರ ಮಹಾತ್ಮೆ, ರಾಜಾ ಬೃಹದ್ರಥ, ಪಂಚವಟಿ, ಲವಕುಶ ಪ್ರಸಂಗಗಳು ಪ್ರಸ್ತುತಗೊಳ್ಳಲಿವೆ.
ವೇಷಭೂಷಣ: ಮೊದಲ ದಿನ ಅಭಿಮಾನಿ ಬಳಗದವರು ಚಿಟ್ಟಾಣಿಯವರಿಗೆ ಯಕ್ಷಗಾನದ ಸಂಪೂರ್ಣ ವೇಷಭೂಷಣ ನೀಡಲಿದ್ದಾರೆ.