ಉಡುಪಿ ನಗರಸಭೆ: ಬಿಜೆಪಿ ವಾರ್ಡ್‌ಗಳಿಗೂ 'ಹಸ್ತ'ಕ್ಷೇಪ
ಉಡುಪಿ: ಉಡುಪಿ ನಗರಸಭೆಯಲ್ಲಿ ಬಿಜೆಪಿ ಸದಸ್ಯರು ಗೆದ್ದಿರುವ ವಾರ್ಡುಗಳಲ್ಲಿ ಅಭಿವೃದ್ಧಿ ಕಾರ್ಯಗಳ ಪರಿಶೀಲನೆಗೆ ಕಾಂಗ್ರೆಸ್ ಸಮಿತಿಗಳನ್ನು ರಚಿಸುವುದಾಗಿ ಶಾಸಕ ಪ್ರಮೋದ್ ಮಧ್ವರಾಜ್ ಹೇಳಿದ್ದಾರೆ.
ನಗರಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ಮೇಲೆ ಪ್ರಥಮ ಸಭೆ ಮಂಗಳವಾರ ನಗರಸಭಾ ಅಧ್ಯಕ್ಷ ಯುವರಾಜ್ ಅಧ್ಯಕ್ಷತೆಯಲ್ಲಿ ನಡೆಯಿತು.
ಕಳೆದ ನಗರಸಭಾ ಚುನಾವಣೆಯ ಸಂದರ್ಭದಲ್ಲಿ ಕಾಂಗ್ರೆಸ್ ಪ್ರಣಾಳಿಕೆಯಲ್ಲಿದ್ದ, ಕಾಂಗ್ರೆಸೇತರ ಸದಸ್ಯರು ಗೆದ್ದಿರುವ ನಗರಸಭಾ ವಾರ್ಡುಗಳಲ್ಲಿ ಕಾಂಗ್ರೆಸ್ ಪಕ್ಷದ ಸಮಿತಿಯೊಂದನ್ನು ರಚಿಸಿ, ಅದರ ಮೂಲಕ ಅಭಿವೃದ್ಧಿ ಕಾರ್ಯಗಳ ಪರಿಶೀಲನೆ ನಡೆಸಲಾಗುವುದು ಎಂಬ ಭರವಸೆ ನೀಡಲಾಗಿತ್ತು. ಈ ಭರವಸೆಗೆ ಪ್ರಥಮ ಸಭೆಯಲ್ಲಿಯೇ ಬಿಜೆಪಿಯಿಂದ ಭಾರಿ ವಿರೋಧ ವ್ಯಕ್ತವಾಯಿತು.
ಸರ್ಕಾರದ ಸುತ್ತೋಲೆ ಉಲ್ಲಂಘನೆ: ಬಿಜೆಪಿಯ ಹಿರಿಯ ಸದಸ್ಯೆ ವಸಂತಿ ಶೆಟ್ಟಿ ತಮ್ಮ ವಾರ್ಡ್‌ನಲ್ಲಿ ತಮ್ಮ ಗಮನಕ್ಕೆ ತಾರದೆ ಯಾರೋ ಬೀದಿ ದೀಪಗಳ ಸಮಸ್ಯೆಯ ಬಗ್ಗೆ ನಗರಸಭೆಯ ಅಧಿಕಾರಿಗಳಿಂದ ಕೆಲಸ ಮಾಡಿಸುತ್ತಿದ್ದಾರೆ ಎಂದು ಆರೋಪಿಸಿದರು. ಇದನ್ನು ಬೆಂಬಲಿಸಿದ ಬಿಜೆಪಿಯ ಇನ್ನೊಬ್ಬ ಹಿರಿಯ ಸದಸ್ಯ ಎಂ.ಆರ್. ಪೈ ಅವರು, ರಾಜ್ಯ ಕಾಂಗ್ರೆಸ್ ಸರ್ಕಾರ, ಯಾವುದೇ ಜನಪ್ರತಿನಿಧಿಯ ಪರವಾಗಿ ಅವರ ಸಂಬಂಧಿಕರು ಅಥವಾ ಬೇರೆಯವರು ಆಡಳಿತದಲ್ಲಿ ಹಸ್ತಕ್ಷೇಪ ಮಾಡಬಾರದು ಎಂಬ ಸುತ್ತೋಲೆಯನ್ನು ಸಭೆಗೆ ಓದಿ ಹೇಳಿ, ಉಡುಪಿಯಲ್ಲಿ ಕಾಂಗ್ರೆಸ್ ತಮ್ಮದೇ ಸರ್ಕಾರದ ಸುತ್ತೋಲೆಯನ್ನು ಉಲ್ಲಂಘಿಸಿ, ವಾರ್ಡ್ ಸಮಿತಿಗಳನ್ನು ರಚಿಸಿ ಆಡಳಿತದಲ್ಲಿ ಮೂಗು ತೂರಿಸುತ್ತಿದ್ದಾರೆ ಎಂದು ಆರೋಪಿಸಿದರು.
ಇದು ಸಭೆಯಲ್ಲಿ ಭಾರೀ ಚರ್ಚೆಗೆ ಕಾರಣವಾಯಿತು, ಬಿಜೆಪಿ ಸದಸ್ಯರು ತಮ್ಮ ವಾರ್ಡಿನಲ್ಲಿ ಅಭಿವೃದ್ಧಿ ಕೆಲಸಗಳನ್ನು ಮಾಡುವುದಕ್ಕೆ ಕಾಂಗ್ರೆಸ್ ಕಾರ್ಯಕರ್ತರ ಸಮಿತಿಯನ್ನು ರಚಿಸುವುದಾದರೇ ಜನರಿಂದ ಆರಿಸಿ ಬಂದಿರುವ ತಮಗೆ ಬೆಲೆ ಏನಿದೆ ಎಂದು ಪ್ರಶ್ನಿಸಿದರು. ಸಮಿತಿ ರಚನೆಗೆ ಒಕ್ಕೊರಲಿನಿಂದ ವಿರೋಧ ವ್ಯಕ್ತಪಡಿಸಿದರು.
ಇದಕ್ಕೆ ಉತ್ತರಿಸಿದ ಶಾಸಕ ಪ್ರಮೋದ್ ಮಧ್ವರಾಜ್, ಸುತ್ತೋಲೆಯಲ್ಲಿ ಜನಪ್ರತಿನಿಧಿಗಳ ಪರವಾಗಿ ಅವರ ಸಂಬಂಧಿಕರು ಆಡಳಿತದಲ್ಲಿ ಮೂಗು ತೂರಿಸಬಾರದು ಎಂದಿದೆಯೇ ಹೊರತು ಯಾವುದೇ ಪಕ್ಷದ ಸಮಿತಿಯನ್ನು ರಚಿಸಬಾರದು ಎಂದು ಎಲ್ಲೂ ಹೇಳಿಲ್ಲ. ಸಮಾಜ ಸೇವೆ ಮಾಡುವುದಕ್ಕೆ ಆಸಕ್ತಿ ಇರುವ ಕಾಂಗ್ರೆಸ್ ಕಾರ್ಯಕರ್ತರು ತಂತಮ್ಮ ವಾರ್ಡಿನ ಸಮಸ್ಯೆಗಳ ಪರಿಹಾರಕ್ಕೆ ಬಗ್ಗೆ ಸಮಿತಿಗಳನ್ನು ರಚಿಸಲಾಗುವುದು, ಅದಕ್ಕೆ ಸರ್ಕಾರ ಸುತ್ತೋಲೆಯ ಅಗತ್ಯ ಇಲ್ಲ ಎಂದು ತಮ್ಮ ಪ್ರಣಾಳಿಕೆಯ ಭರವಸೆಯನ್ನು ಪುನರುಚ್ಚರಿಸಿದರು.
ಅಧ್ಯಕ್ಷರ ಆಯ್ಕೆಯಾಗಿ 45 ದಿನಗಳಷ್ಟು ತಡವಾಗಿ ಪ್ರಥಮ ಸಭೆ ಕರೆದ ಬಗ್ಗೆ, ನಗರಸಭೆಯಲ್ಲಿ ಕಸ ವಿಲೇವಾರಿಯ ಅವ್ಯವಸ್ಥೆ, ಮಲ್ಪೆಯಲ್ಲಿ ಕಾನೂನು ಬಾಹಿರವಾಗಿ ಬಾರುಗಳು ಪರವಾನಗಿ ನೀಡಿರುವ ಬಗ್ಗೆ, ಬಸ್ಸು ನಿಲ್ದಾಣದಲ್ಲಿ ವಲಸೆ ಕಾರ್ಮಿಕರಿಂದ ಸ್ವಚ್ಛತೆಗೆ ಭಂಗವಾಗುತ್ತಿರುವ ಬಗ್ಗೆ, ತ್ಯಾಜ್ಯ ವಿಲೇವಾರಿಯ ಬಿಲ್ ಪಾವತಿಯ ಅಕ್ರಮಗಳ ಬಗ್ಗೆಯೂ ಚರ್ಚೆಗಳು ನಡೆದವು.
ವೇದಿಕೆಯಲ್ಲಿ ಅಧ್ಯಕ್ಷ, ಶಾಸಕರೊಂದಿಗೆ, ಉಪಾಧ್ಯಕ್ಷೆ ಅಮೃತಾ ಕೃಷ್ಣಮೂರ್ತಿ, ಪೌರಾಯುಕ್ತ ಶ್ರೀಕಾಂತ್ ರಾವ್ ಉಪಸ್ಥಿತರಿದ್ದರು. ಬಿಜೆಪಿಯ ಶ್ಯಾಮಪ್ರಸಾದ್ ಕುಡ್ವ, ನವೀನ್ ಭಂಡಾರಿ, ನರಸಿಂಹ ನಾಯಕ್, ಸುಮಿತ್ರಾ ನಾಯಕ್, ಕಾಂಗ್ರೆಸ್‌ನ ಪ್ರಶಾಂತ್ ಭಟ್, ಶಶಿರಾಜ್ ಕುಂದರ್, ವಿಜಯ ಪೂಜಾರಿ, ಸೆಲಿನಾ ಕರ್ಕಡ ಮುಂತಾದವರು ಚರ್ಚೆಯಲ್ಲಿ ಭಾಗವಹಿಸಿದ್ದರು.
ಶಾಸಕ ಪ್ರಮೋದ್ ಮಧ್ವರಾಜ್ ಈ ಬಗ್ಗೆ ಲೋಕಾಯುಕ್ತ ತನಿಖೆ ನಡೆಸೋಣ ಎಂದರು, ಬಿಜೆಪಿಯ ದಿನಕರ ಶೆಟ್ಟಿ, ಎಂ.ಆರ್. ಪೈ, ಯಶ್‌ಪಾಲ್ ಸುವರ್ಣ ಮುಂತಾದವರು ಸಿಬಿಐಗೆ ಒಪ್ಪಿಸೋಣ ಎಂದರು. ಆದರೆ ಯಾರೂ ಈ ಬಗ್ಗೆ ಗಂಭೀರವಾಗಿ ಚರ್ಚೆ ನಡೆಸಲಿಲ್ಲ, ಕೊನೆಗೆ ಯಾರ ಮೂಲಕ ತನಿಖೆ ನಡೆಸಬೇಕು ಎಂದು ನಿರ್ಣಯಕ್ಕೂ ಸಭೆ ಬರಲಿಲ್ಲ.
ಪುರಭವನ, ನಿರ್ಮಿತಿ ತನಿಖೆ ಯಾರಿಂದ...?
ಬಿಜೆಪಿ ಅಧಿಕಾರದಲ್ಲಿದ್ದಾಗ 4 ಕೋಟಿ ವೆಚ್ಚದಲ್ಲಿ ಪುನರ್ ನಿರ್ಮಿಸಿದ್ದ ಪುರಭವನದ ಬಗ್ಗೆ ಲೋಕಾಯುಕ್ತ ತನಿಖೆ ನಡೆಸಬೇಕೆಂದು ಕಾಂಗ್ರೆಸ್ ಸದಸ್ಯರು, ಸಿಬಿಐ ತನಿಖೆ ನಡೆಸಬೇಕೆಂದು ಬಿಜೆಪಿ ಸದಸ್ಯರು ಆಗ್ರಹಿಸಿದರು. ಈ ಪುರಭವನವನ್ನು ಪುರುಷೋತ್ತಮ ಶೆಟ್ಟಿ ಎಂಬವರಿಗೆ ಪ್ರತಿವರ್ಷ ನಗರಸಭೆಯಿಂದ ನವೀಕರಣಗೊಳಿಸುವ 5 ವರ್ಷಗಳ ಗುತ್ತಿಗೆ ನೀಡಲಾಗಿದ್ದು, ಸಭೆಯಲ್ಲಿ ಗುತ್ತಿಗೆ ನವೀಕರಣದ ಬಗ್ಗೆ ಅಧಿಕಾರಿಗಳು ಪ್ರಸ್ತಾಪಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಕಾಂಗ್ರೆಸ್ ಸದಸ್ಯ ರಮೇಶ್ ಕಾಂಚನ್, ಈ ಪುರಭವನದ ಕಾಮಗಾರಿ ನಡೆಸಿದ ನಿರ್ಮಿತಿ ಕೇಂದ್ರದ ಬಗ್ಗೆ ಸಂಶಯಗಳಿವೆ, ಆದ್ದರಿಂದ ಆ ಬಗ್ಗೆಯೂ ತನಿಖೆ ನಡೆಸಬೇಕು ಎಂದರು.