ಬಿದಾಯಿ ಯೋಜನೆಯಿಂದ ಮುಸ್ಲಿಂರಲ್ಲಿ ವಿಚ್ಛೇದನ ಹೆಚ್ಚಳ: ತಿಂಗಳೆ
ಉಡುಪಿ: ರಾಜ್ಯ ಸರ್ಕಾರವು ಮುಸ್ಲಿಂ ಬಡ ಮಹಿಳೆಯರಿಗಾಗಿ ಜಾರಿ ತಂದ ಬಿದಾಯಿ ಯೋಜನೆಯು ಉದ್ದೇಶಪೂರ್ವಕವಾಗಿ ಮುಸ್ಲಿಂ ಸಮುದಾಯದಲ್ಲಿ ವಿಚ್ಛೇದನ ಹೆಚ್ಚುವಂತಹ ಪರಿಸ್ಥಿತಿಯನ್ನು ನಿರ್ಮಿಸಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ತಿಂಗಳೆ ವಿಕ್ರಮಾರ್ಜುನ ಹೆಗ್ಡೆ ರಾಜ್ಯ ಸರ್ಕಾರ ಮೇಲೆ ಆರೋಪಿಸಿದರು.
ಮಂಗಳವಾರ ಬಿಜೆಪಿ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಲೋಕಸಭಾ ಚುನಾವಣೆಯಲ್ಲಿ ಮತಪಡೆಯುವ ಉದ್ದೇಶದಿಂದ ಈ ಯೋಜನೆಯನ್ನು ಜಾರಿಗೆ ತರುವುದರ ಹಿಂದಿನ ಉದ್ದೇಶ. ಮುಸ್ಲಿಂ ತುಷ್ಟೀಕರಣದ ಕಾರ್ಯಕ್ಕೆ ರಾಜ್ಯ ಸರ್ಕಾರ ಕೈ ಹಾಕಿದೆ. ಈ ಯೋಜನೆಯು ಕೇವಲ ಮುಸ್ಲಿಂ ಮಹಿಳೆಯರಿಗೆ ಮಾತ್ರ ನೀಡಿರುವುದು ಯಾಕೆ ಕ್ರಿಶ್ಚಿಯನ್, ಪಾರ್ಸಿ, ಜೈನ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಮಹಿಳೆಯರು ಏನು ತಪ್ಪು ಮಾಡಿದ್ದಾರೆ ಎಂದು ರಾಜ್ಯ ಸರ್ಕಾರವನ್ನು ಪ್ರಶ್ನಿಸಿದರು.
ಸಮಾಜದ ಬಡ ಮಹಿಳೆಯರಿಗೂ ಈ ಯೋಜನೆ ಸೌಲಭ್ಯ ಸಿಗಬೇಕು. ಈ ನೆಲೆಯಲ್ಲಿ ಪರಿಶಿಷ್ಟ ಜಾತಿ, ದಲಿತ ಮುಖಂಡರು ಮತ್ತಿತರ ಸಮುದಾಯದ ಮುಖಂಡರು ಈ ಬಗ್ಗೆ ಪ್ರತಿಭಟನೆಯನ್ನು ಮಾಡಿ ರಾಜ್ಯ ಸರ್ಕಾರದ ಮೇಲೆ ಒತ್ತಡ ಹೇರಬೇಕು ಎಂದರು.
ಕಾಲುಬಾಯಿ ಜ್ವರ ಕುಂದಾಪುರ ತಾಲೂಕಿನಲ್ಲಿ ವ್ಯಾಪಕವಾಗಿ ಹರಡಿದ್ದು, ರೈತರಲ್ಲಿ ಆತಂಕ ಸೃಷ್ಟಿಸಿದೆ. ಇದರ ಬಗ್ಗೆ ಇಲಾಖೆ ಮುಂಜಾಗೃತಾ ಕ್ರಮಗಳನ್ನು ಕೈಗೊಂಡಿದೆ ಎಂದು ಸಮರ್ಥಿಸಿಕೊಳ್ಳುತ್ತಿದೆ. ಇಲಾಖೆ ಯಾವ ಮುಂಜಾಗೃತಾ ಕ್ರಮಗಳನ್ನು ಕೈಗೊಂಡಿದೆ, ಜಾನುವಾರುಗಳಿಗೆ ಲಸಿಕೆ ಹಾಗೂ ಚುಚ್ಚು ಮದ್ದುಗಳನ್ನು ನೀಡಲಾಗಿದೆ ಎಂದು ಪಶುಸಂಗೋಪನಾ ಇಲಾಖೆಯ ಉಪನಿರ್ದೇಶಕರು ಉತ್ತರಿಸಬೇಕು ಎಂದ ಅವರು ಜಿಲ್ಲಾಡಳಿತ ಈ ಬಗ್ಗೆ ಕ್ರಮಕೈಗೊಳ್ಳಬೇಕು ಎಂದರು.
ನ. 17ರಂದು ನಡೆಯುವ ಮೋದಿ ರ್ಯಾಲಿ ಕುರಿತು ನ.7,8, ಮತ್ತು 9ರಂದು ಪಕ್ಷದ ಶಕ್ತಿ ಕೇಂದ್ರಗಳಲ್ಲಿ ಸಭೆ ನಡೆಸಲಾಗುವುದು ಜತೆಗೆ ಜನರ ಮನೆಮನೆಗಳಿಗೆ ಭೇಟಿ ನೀಡಿ ಮಾಹಿತಿ ನೀಡಲಾಗುವುದು ಎಂದರು.
ಸುದ್ದಿಗೋಷ್ಠಿಯಲ್ಲಿ ಮಟ್ಟಾರು ರತ್ನಾಕರ ಹೆಗ್ಡೆ, ಗೀತಾಂಜಲಿ ಸುವರ್ಣ, ನವೀನ್ ಕುತ್ಯಾರು, ಕಿಶನ್ ಶೆಟ್ಟಿ ಇದ್ದರು.