ಮುಸ್ಲಿಮರಿಗೆ ವಿವಾಹ ಸಹಾಯಧನ ಯೋಜನೆಗೆ ಅಸಮಾಧಾನ
ಉಡುಪಿ: ರಾಜ್ಯ ಸರ್ಕಾರದ 'ಅಹಿಂದಪರ ಯೋಜನೆ'ಯೊಂದು ಉಡುಪಿ ಜಿ.ಪಂ.ನಲ್ಲಿ ಶನಿವಾರ ನಡೆದ ಸಭೆಯಲ್ಲಿ ತೀವ್ರ ಚರ್ಚೆ, ಅಸಮಾಧಾನ, ನಿರ್ಣಯಕ್ಕೆ ಕಾರಣವಾಗಿದೆ.
ರಾಜ್ಯದಲ್ಲಿ ಆರ್ಥಿಕವಾಗಿ ಹಿಂದುಳಿದ ಅಲ್ಪಸಂಖ್ಯಾತ ಮುಸ್ಲಿಂ ಹೆಣ್ಣುಮಕ್ಕಳಿಗೆ ವಿಚ್ಛೇದಿತ ಮತ್ತು ವಿಧವೆಯರಿಗೆ ವೈಯಕ್ತಿಕ ಸಾಮೂಹಿಕ ಮದುವೆಗೆ ಸರ್ಕಾರ ರು. 50 ಸಾವಿರ ಸಹಾಯಧನ ನೀಡುವ ಯೋಜನೆಯನ್ನು ಬಜೆಟ್ ಭಾಷಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದ್ದರು. ಆಗ ಯಾರೂ ಅದನ್ನು ಗಂಭೀರವಾಗಿ ಪರಿಗಣಿಸಿರಲಿಲ್ಲ.
ಆದರೆ ಸೆ. 3ರಂದು ಅಲ್ಪಸಂಖ್ಯಾತರ ಕಲ್ಯಾಣ, ಹಜ್ ಮತ್ತು ವಕ್ಫ್ ಸಚಿವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಮುಖ್ಯಮಂತ್ರಿ ಘೋಷಣೆಯನ್ನು ಕಾರ್ಯರೂಪಕ್ಕೆ ತರಲು ನಿರ್ಣಯಿಸಲಾಗಿದೆ. ಅದರ ಗಂಭೀರತೆ ಈಗ ಅರ್ಥವಾಗಿ ಚರ್ಚೆಗೆ ಗ್ರಾಸವಾಗಿದೆ.
ಅ.26ರಂದು ಉಡುಪಿ ಜಿ.ಪಂ. ಸಭೆಯಲ್ಲಿ ಸರ್ಕಾರ ಈ ಆದೇಶದ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತವಾಯಿತು. ಸಹಜವಾಗಿಯೇ ಬಿಜೆಪಿ ಜಿ.ಪಂ. ಸದಸ್ಯರಿಗೆ ಇದು ಕಾಂಗ್ರೆಸ್ ಸರ್ಕಾರದ ಯೋಜನೆ, ಅಲ್ಪಸಂಖ್ಯಾತರಿಗೆ ಮಾತ್ರ, ಹಿಂದುಗಳಿಗಿಲ್ಲ ಎಂಬ ಕಾರಣಕ್ಕೆ ಅಸಮಾಧಾನ ಉಂಟಾದರೂ, ಕಾಂಗ್ರೆಸ್ನ ಜಿ.ಪಂ. ಸದಸ್ಯರಿಗೂ ಈ ಯೋಜನೆಯಿಂದ ಅಷ್ಟೇನೂ ಖುಷಿಯಾಗಿಲ್ಲ. ಜಿ.ಪಂ.ನಲ್ಲಿ ಬಿಜೆಪಿ ಸದಸ್ಯೆ ಗೀತಾಂಜಲಿ ಸುವರ್ಣ ಈ ವಿಷಯ ಪ್ರಸ್ತಾಪಿಸಿದರು, ಬಡ ಕುಟುಂಬದ ಹೆಣ್ಣುಮಕ್ಕಳ ಮದುವೆಗೆ ಧನಸಹಾಯ ಮಾಡುವ ಈ ಯೋಜನೆ ಸ್ವಾಗತಾರ್ಹ, ಆದರೆ ಸರ್ಕಾರ ಬಡವರು ಕೇವಲ ಮುಸ್ಲಿಂ ಸಮುದಾಯದಲ್ಲಿ ಮಾತ್ರ ಇದ್ದಾರೆ, ಅವರ ಮನೆಯ ಹೆಣ್ಣುಮಕ್ಕಳಿಗೆ ಮಾತ್ರ ಮದುವೆಗೆ ಕಷ್ಟ ಇದೆ ಎಂದು ತಿಳಿದುಕೊಂಡಂತಿದೆ. ಇದು ಸರಿಯಲ್ಲ, ಹಿಂದೂ ಮತ್ತು ಇತರ ಧರ್ಮಗಳಲ್ಲಿಯೂ ಬಡವರ ಮನೆಯಲ್ಲಿ ಹೆಣ್ಣು ಮಕ್ಕಳಿದ್ದಾರೆ. ಅವರಿಗೂ ಈ ಸೌಲಭ್ಯ ಸಿಗಬೇಕು ಎಂದು ಆಗ್ರಹಿಸಿದರು. ಕಾಂಗ್ರೆಸ್ನ ಹಿರಿಯ ಸದಸ್ಯ ಅನಂತ ಮೂವಾಡಿ ಕೂಡ ಸರ್ಕಾರದ ಈ ಏಕಪಕ್ಷೀಯ ಯೋಜನೆಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು. ಪರಿಶಿಷ್ಟ ಜಾತಿ ಮತ್ತು ವರ್ಗಗಳಲ್ಲಿ ಬಹುತೇಕ ಕುಟುಂಬಗಳು ಬಡತನದಲ್ಲಿವೆ. ಸರ್ಕಾರ ಈ ಕುಟುಂಬಗಳ ಹೆಣ್ಣುಮಕ್ಕಳಿಗೂ ರು. 50,000 ನೀಡಬೇಕು. ಅದಕ್ಕಾಗಿ ಸರ್ಕಾರ ಯೋಜನೆಯನ್ನು ತಿದ್ದುಪಡಿ ಮಾಡಬೇಕು ಎಂದು ಆಗ್ರಹಿಸಿದರು.
ಸಭೆಯಲ್ಲಿ ಈ ಬಗ್ಗೆ ಸಾಕಷ್ಟು ಚರ್ಚೆ ನಡೆಯಿತು. ಕೊನೆಗೆ ಸರ್ಕಾರದ ಈ ಯೋಜನೆಯನ್ನು ಎಲ್ಲಾ ಜಾತಿ ಮತ್ತು ಧರ್ಮದ ಬಡ ಕುಟುಂಬಗಳಿಗೆ ವಿಸ್ತರಿಸಲು ಆಗ್ರಹಿಸುವ ನಿರ್ಣಯ ಕೈಗೊಳ್ಳಲಾಯಿತು.
ತುಷ್ಟೀಕರಣದ ಯೋಜನೆ
ಇದು ಕಾಂಗ್ರೆಸ್ ಸರ್ಕಾರದ ಮುಸ್ಲಿಂ ತುಷ್ಟೀಕರಣ ನೀತಿಗೆ ಒಂದು ಒಳ್ಳೆಯ ಉದಾಹರಣೆ. ಬಡವರು ಇತರ ಧರ್ಮ ಜಾತಿಯಲ್ಲಿಯೂ ಇದ್ದಾರೆ, ಸರ್ಕಾರದ ಈ ಯೋಜನೆಯಿಂದ ಅವರಿಗೆ ಅನ್ಯಾಯವಾಗುತ್ತದೆ. ಆದ್ದರಿಂದ ಸರ್ಕಾರ ಕಂಕಣ ಭಾಗ್ಯ ಎನ್ನುವ ಹೆಸರಿನಲ್ಲಿ ಎಲ್ಲಾ ಬಡವರಿಗೂ ಈ ಯೋಜನೆಯ ಲಾಭ ಸಿಗುವಂತೆ ಮಾಡಬೇಕು.