ಕೊಳ್ನಾಡು: ಬ್ಯಾಂಕ್ ಕಳವು ಯತ್ನ ವಿಫಲ
ಬಂಟ್ವಾಳ: ಸಹಕಾರಿ ಬ್ಯಾಂಕ್‌ಗೆ ನುಗ್ಗಿದ ಕಳ್ಳರ ತಂಡ, ಕಳವಿಗೆ ಯತ್ನಿಸಿ ವಿಫಲವಾದ ನಡೆಸಿರುವ ಘಟನೆ ಕೊಳ್ನಾಡು ಗ್ರಾಮದಲ್ಲಿ ಸೋಮವಾರ ಬೆಳಕಿಗೆ ಬಂದಿದೆ.
ವಿಟ್ಲ ಪಡ್ನೂರು ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್ನ ಕುಡ್ತಮುಗೇರು ಶಾಖೆಯಯಲ್ಲಿ ಕಳವು ಯತ್ನ ನಡೆದಿದ್ದು, ಕಿಟಕಿ ಮೂಲಕ ಒಳನುಗ್ಗಿದ ಕಳ್ಳರು ಚಿನ್ನಾಭರಣಕ್ಕಾಗಿ ಜಾಲಾಡಿದ್ದಲ್ಲದೆ ಲಾಕರ್‌ನ್ನು ಗ್ಯಾಸ್ ಕಟ್ಟರ್ ಮೂಲಕ ಒಡೆಯಲು ವಿಫಲ ಯತ್ನ ನಡೆಸಿ ಪರಾರಿಯಾಗಿದ್ದಾರೆ.
ಬ್ಯಾಂಕ್ ಒಳಗಡೆ ಗ್ಯಾಸ್ ಹಂಡೆಗಳು ಮತ್ತು ಕಟ್ಟರ್ ಹಾಗೂ ಹೊರಗಡೆ ಟಾರ್ಚ್ ಲೈಟ್, ಪತ್ತೆಯಾಗಿದ್ದು ಸ್ಥಳಕ್ಕೆ ವಿಟ್ಲ ಪೊಲೀಸರು, ಬಂಟ್ವಾಳ ವೃತ್ತ ನಿರೀಕ್ಷಕ, ಬೆರಳಚ್ಚು ತಜ್ಞರು, ಶ್ವಾನದಳವನ್ನೂ ಕರೆಸಲಾಗಿದ್ದು ತನಿಖೆ ಮುಂದುವರಿದೆ.
ನಗ-ನಗದು ಭದ್ರ: ಕೊಳ್ನಾಡು ಗ್ರಾಮದ ಕುಡ್ತಮುಗೇರಿನಲ್ಲಿರುವ ವಿಟ್ಲ ಪಡ್ನೂರು ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್ ಶಾಖೆಯ ಲಾಕರ್‌ನಲ್ಲಿ ಸುಮಾರು ರು. 2 ಕೋಟಿಗೂ ಅಧಿಕ ಮೌಲ್ಯದ ಗ್ರಾಹಕರ ಚಿನ್ನಾಭರಣಗಳು ಮತ್ತು ನಗದು ರು. 2 ಲಕ್ಷಗಳಿದ್ದವೆಂದು ಬ್ಯಾಂಕ್ ಸಿಬ್ಬಂದಿ ಮಾಹಿತಿ ನೀಡಿದ್ದಾರೆ. ಆದರೆ ಕಳವು ಯತ್ನ ವಿಫಲವಾದ ಕಾರಣ ಅವೆಲ್ಲವೂ ಭದ್ರವಾಗಿವೆ.
ಸೂಕ್ತ ಭದ್ರತೆ ಇಲ್ಲ...: ಭಾರಿ ಮೊತ್ತದ ಚಿನ್ನಾಭರಣ ಹಾಗೂ ನಗದು ಹಣ ಕ್ರೋಢೀಕರಿಸಿಟ್ಟ ಈ ಬ್ಯಾಂಕ್‌ಗೆ ಯಾವುದೇ ರೀತಿಯಲ್ಲೂ ಭದ್ರತೆ ಮಾಡದಿರುವ ಬಗ್ಗೆ ಗ್ರಾಹಕರಿಂದ ಆಕ್ರೋಶ ವ್ಯಕ್ತವಾಗಿದೆ. ಬ್ಯಾಂಕ್‌ನಲ್ಲಿ ಸಿ.ಸಿ. ಟಿ.ವಿ.ಯಾಗಲೀ ಅಥವಾ ಸೈರನ್ ಆಗಲಿ, ರಾತ್ರಿ ಪಾಳಿಯ ಸಿಬ್ಬಂದಿಯಾಗಲೀ ನೇಮಿಸಿಲ್ಲ. ಇಲ್ಲಿನ ಅಭದ್ರತೆಯನ್ನು ಅರಿತವರೇ ದರೋಡೆಗೆ ಸ್ಕೆಚ್ ಹಾಕಿರುವ ಬಗ್ಗೆ ಅನುಮಾನ ವ್ಯಕ್ತವಾಗಿದೆ.
ಶನಿವಾರ ಬ್ಯಾಂಕ್ ಮುಚ್ಚಿ ತೆರಳಿದ್ದ ಬ್ಯಾಂಕ್‌ನ ಸಿಬ್ಬಂದಿ ಸೋಮವಾರ ಬೆಳಗ್ಗೆ 9.30ರ ಸುಮಾರಿಗೆ ಕರ್ತವ್ಯಕ್ಕೆ ಬಂದಾಗಲೇ ಕಳವಿಗೆ ಯತ್ನ ನಡೆದಿರುವುದು ಗೊತ್ತಾಗಿದೆ.
ಶನಿವಾರ ರಾತ್ರಿ ಅಥವಾ ಭಾನುವಾರ ರಾತ್ರಿ ಈ ಕೃತ್ಯ ನಡೆದಿರಬಹುದೆಂದು ಶಂಕಿಸಲಾಗಿದೆ. ಕಳವುನಡೆದಿದೆ ಎಂಬ ಸುದ್ದಿ ಹಬ್ಬುತ್ತಿದ್ದಂತೆಯೇ ಚಿನ್ನಾಭರಣಗಳನ್ನು ಅಡವಿಟ್ಟ ನೂರಾರು ಗ್ರಾಹಕರು ಆತಂಕಗೊಂಡು ಬ್ಯಾಂಕ್ ಮುಂದೆ ಜಮಾಯಿಸಿದ್ದರು.
ಆದರೆ ಚಿನ್ನಾಭರಣಗಳು ಕಳ್ಳರ ಪಾಲಾಗದೆ ಲಾಕರ್‌ನಲ್ಲಿ ಭದ್ರವಾಗಿರುವುದನ್ನು ಕಣ್ಣಾರೆ ಕಂಡ ಬಳಿಕವಷ್ಟೆ ಗ್ರಾಹಕರು ನಿಟ್ಟುಸಿರು ಬಿಟ್ಟಿದ್ದಾರೆ. ಬಂಟ್ವಾಳ ವೃತ್ತ ನಿರೀಕ್ಷಕ ಅನಿಲ್ ಎಸ್. ಕುಲಕರ್ಣಿ, ವಿಟ್ಲ ಠಾಣಾಧಿಕಾರಿ ಮಾಧವ ಕೂಡ್ಲು ಮತ್ತು ಸಿಬ್ಬಂದಿ ಸ್ಥಳ ಪರಿಶೀಲನೆ ನಡೆಸಿದ್ದು, ವಿಟ್ಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.