ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಉಡುಪಿ

ಗೋ ಕಳ್ಳತನ: ಸಂತ್ರಸ್ತರಿಂದ ದೈವ, ದೇವರಿಗೆ ಮೊರೆ

Rashmi Kasaragodu
Updated On : 3 Sept 2013, 1:26 am

ಉಡುಪಿ: ಜಿಲ್ಲೆಯಾದ್ಯಂತ ಗೋ ಕಳ್ಳತನ, ಅಕ್ರಮ ಸಾಗಣೆ, ಹತ್ಯೆ ನಿತ್ಯ ನಡೆಯುತ್ತಿದ್ದು, ಅದನ್ನು ತಡೆಯಲು ಪೊಲೀಸ್ ಇಲಾಖೆಯೂ ವಿಫಲವಾಗಿದೆ. ಇದೀಗ ಗೋವುಗಳನ್ನು ಸಾಕುವವರು ಬೇರೆ ದಾರಿ ಇಲ್ಲದೇ ದೈವದೇವರ ಮೊರೆ ಹೋಗುತ್ತಿದ್ದಾರೆ.   ಇಲ್ಲಿಗೆ ಸಮೀಪದ ಪೆರಂಪಳ್ಳಿ, ದೊಡ್ಡಣಗುಡ್ಡೆ, ಸಗ್ರಿ, ಕರಂಬಳ್ಳಿ ಮುಂತಾದ ಗ್ರಾಮಗಳಲ್ಲಿ ಇತ್ತೀಚಿಗೆ ಗೋ ಕಳ್ಳತನ ಹೆಚ್ಚುತ್ತಿದೆ. ಶನಿವಾರ ಪೆರಂಪಳ್ಳಿಯ ಭಟ್ಟಕೋಡಿ ಎಂಬಲ್ಲಿನ ನಿವಾಸಿ ನಾರಾಯಣ ಮೂಲ್ಯ ಅವರ ಗರ್ಭ ಧರಿಸಿದ 2 ದನಗಳನ್ನು ಮೇವಿಗಾಗಿ ಸಮೀಪದ ಗುಡ್ಡದಲ್ಲಿ ಕಟ್ಟಿ ಹಾಕಿದ್ದು, ಮಧ್ಯಾಹ್ನ 3ರಿಂದ 3.30 ಮಧ್ಯೆ ಯಾರೋ ದುಷ್ಕರ್ಮಿಗಳು ಕದ್ದೊಯ್ದಿದ್ದಾರೆ. ಕಳವಾದ ಗೋವುಗಳ ಮೌಲ್ಯ 25 ಸಾವಿರಕ್ಕೂ ಅಧಿಕ. ಈ ಸಂಬಂಧವಾಗಿ ತಕ್ಷಣ ಪೊಲೀಸರಿಗೆ ದೂರು ನೀಡಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಗ್ರಾಮಸ್ಥರು ಆರೋಪಿಸುತ್ತಿದ್ದಾರೆ.
ದೈವಗೆ ದೂರು: ನಿತ್ಯ ನಡೆಯುತ್ತಿರುವ ಈ ಘಟನೆಗಳಿಂದ ರೋಸಿ ಹೋಗಿರುವ ಪೆರಂಪಳ್ಳಿ ಮತ್ತು ಸುತ್ತಮುತ್ತಲಿನ ಗ್ರಾಮಸ್ಥರು ಪ್ರಸ್ತುತ ವ್ಯವಸ್ಥೆಯಲ್ಲಿ ತಮಗೆ ನ್ಯಾಯ ಸಿಗುವುದಿಲ್ಲ ಎಂದು ನಿರ್ಧರಿಸಿ, ಭಾನುವಾರ ಊರಿನ ಕಾರ್ಣಿಕದ ದೈವ ಎಡ್ಮೇರಿ ಬೊಬ್ಬರ್ಯನಿಗೆ ದೂರು ನೀಡಿದ್ದಾರೆ.   ದೈವಸ್ಥಾನದ ಗುರಿಕಾರ ತುಕ್ರ ಬಂಗೇರ, ಸ್ಥಳೀಯ ಯುವಕ ಮಂಡಲದ ಅಧ್ಯಕ್ಷ ವಾಸುದೇವ ಭಟ್, ನಗರಸಭಾ ಸದಸ್ಯ ಪ್ರಶಾಂತ್ ಭಟ್, ಸ್ಥಳೀಯ ಗಣ್ಯರಾದ ಹರಿಕೃಷ್ಣ ಶಿವತ್ತಾಯ, ವಿಜಯ ಪೂಜಾರಿ, ಕೃಷ್ಣ ಮೂಲ್ಯ, ಸುಧಾಕರ್, ಜಗದೀಶ್ ಆಚಾರ್ಯ, ಪಿ.ಎನ್. ರಾಘು ಭಟ್ ಹಾಗೂ ದನ ಕಳೆದುಕೊಂಡ ನತದೃಷ್ಟ ನಾರಾಯಣ ಮೂಲ್ಯ ಅವರ ನೇತೃತ್ವದಲ್ಲಿ ದೈವಕ್ಕೆ ಪ್ರಾರ್ಥನೆ ಸಲ್ಲಿಸಲಾಯಿತು.  ಒಂದು ವೇಳೆ ಕದ್ದ ದನಗಳು ಜೀವಂತವಿದ್ದರೆ ಅವುಗಳನ್ನು ಸುರಕ್ಷಿತವಾಗಿ ಅವುಗಳ ಹಟ್ಟಿಗೆ ತಲುಪಿಸುವುದು, ಇಲ್ಲದಿದ್ದಲ್ಲಿ ಅವುಗಳನ್ನು ಕದ್ದೊಯ್ದು ಹತ್ಯೆ ಮಾಡಿದ, ಅವುಗಳ ಮಾಂಸ ಭಕ್ಷಿಸಿದ ಎಲ್ಲರಿಗೂ ಉಗ್ರ ಶಿಕ್ಷೆಯಾಗುವಂತೆ ನೋಡಿಕೊಳ್ಳುವಂತೆ ಪ್ರಾರ್ಥಿಸಲಾಯಿತು. ಮುಂದೆ ಇಂಥ ಘಟನೆಗಳು ಮರುಕಳಿಸದಂತೆ ನೋಡಿಕೊಳ್ಳುವಂತೆಯೂ ದೈವಕ್ಕೆ ಮೊರೆ ಸಲ್ಲಿಸಲಾಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement