ಜಿಲ್ಲಾದ್ಯಂತ ಗೋ ಕಳವು, ಹತ್ಯೆ: ಸಂತ್ರಸ್ತರಿಂದ ದೈವ, ದೇವರಿಗೆ ಮೊರೆ
ಉಡುಪಿ: ಜಿಲ್ಲೆಯಾದ್ಯಂತ ಗೋ ಕಳ್ಳತನ, ಅಕ್ರಮ ಸಾಗಾಟ, ಹತ್ಯೆ ನಿತ್ಯ ನಡೆಯುತ್ತಿದ್ದು, ಅದನ್ನು ತಡೆಯಲು ಪೊಲೀಸ್ ಇಲಾಖೆಯೂ ವಿಫಲವಾಗಿದ್ದು, ಇದೀಗ ಗೋವುಗಳನ್ನು ಸಾಕುವವರು ಬೇರೆ ದಾರಿ ಇಲ್ಲದೇ ದೈವದೇವರ ಮೊರೆ ಹೋಗಬೇಕಾದ ಅನಿವಾರ್ಯ ಪರಿಸ್ಥಿತಿ ಉಂಟಾಗಿದೆ.
ಇಲ್ಲಿನ ಸಮೀಪರ ಪೆರಂಪಳ್ಳಿ, ದೊಡ್ಡಣಗುಡ್ಡೆ, ಸಗ್ರಿ, ಕರಂಬಳ್ಳಿ ಮುಂತಾದ ಗ್ರಾಮಗಳಲ್ಲಿ ಇತ್ತೀಚಿನ ದಿನಗಳಲ್ಲಿ ಗೋ ಕಳ್ಳತನದ ಅನೇಕ ಪ್ರಕರಣಗಳು ನಡೆದಿವೆ. ಶನಿವಾರ ಪೆರಂಪಳ್ಳಿಯ ಭಟ್ಟಕೋಡಿ ಎಂಬಲ್ಲಿನ ನಿವಾಸಿ ನಾರಾಯಣ ಮೂಲ್ಯ ಅವರ ಗರ್ಭ ಧರಿಸಿದ 2 ದನಗಳನ್ನು ಮೇವಿಗಾಗಿ ಸಮೀಪದ ಗುಡ್ಡೆಯಲ್ಲಿ (ಡಿ.ಸಿ. ಕಚೇರಿಯ ಹಿಂಭಾಗ) ಕಟ್ಟಿ ಹಾಕಿದ್ದು, ಮಧ್ಯಾಹ್ನ 3ರಿಂದ 3.30 ಗಂಟೆ ಮಧ್ಯೆ ಯಾರೋ ದುಷ್ಕರ್ಮಿಗಳು ಕದ್ದೊಯ್ದಿದ್ದಾರೆ. ಕಳವಾದ ಗೋವುಗಳ ಮೌಲ್ಯ ರು. 25 ಸಾವಿರಕ್ಕೂ ಅಧಿಕ.
ಈ ಸಂಬಂಧ ತಕ್ಷಣ ಪೊಲೀಸರಿಗೆ ದೂರು ನೀಡಲಾಗಿದ್ದರೂ, ಯಾವುದೇ ಕ್ರಮ ನಡೆದಿಲ್ಲ.
ನಿತ್ಯ ನಡೆಯುತ್ತಿರುವ ಈ ಘಟನೆಗಳಿಂದ ರೋಸಿ ಹೋಗಿರುವ ಪೆರಂಪಳ್ಳಿ ಮತ್ತು ಸುತ್ತಮುತ್ತಲಿನ ಗ್ರಾಮಸ್ಥರು ಪ್ರಸ್ತುತ ವ್ಯವಸ್ಥೆಯಲ್ಲಿ ತಮಗೆ ನ್ಯಾಯ ಸಿಗುವುದಿಲ್ಲ ಎಂದು ನಿರ್ಧರಿಸಿ, ಭಾನುವಾರ ಊರಿನ ಕಾರ್ಣಿಕದ ದೈವ ಎಡ್ಮೇರಿ ಬೊಬ್ಬರ್ಯನಿಗೆ ದೂರು ನೀಡಿದ್ದಾರೆ.
ದೈವಸ್ಥಾನದ ಗುರಿಕಾರ ತುಕ್ರ ಬಂಗೇರ, ಸ್ಥಳೀಯ ಯುವಕ ಮಂಡಲದ ಅಧ್ಯಕ್ಷ ವಾಸುದೇವ ಭಟ್, ನಗರಸಭಾ ಸದಸ್ಯ ಪ್ರಶಾಂತ್ ಭಟ್, ಸ್ಥಳೀಯ ಗಣ್ಯರಾದ ಹರಿಕೃಷ್ಣ ಶಿವತ್ತಾಯ, ವಿಜಯ ಪೂಜಾರಿ, ಕೃಷ್ಣ ಮೂಲ್ಯ, ಸುಧಾಕರ್, ಜಗದೀಶ್ ಆಚಾರ್ಯ, ಪಿ.ಎನ್. ರಾಘು ಭಟ್ ಹಾಗೂ ದನ ಕಳೆದುಕೊಂಡ ನತದೃಷ್ಟ ನಾರಾಯಣ ಮೂಲ್ಯ ಅವರ ನೇತೃತ್ವದಲ್ಲಿ ದೈವಕ್ಕೆ ಪ್ರಾರ್ಥನೆ ಸಲ್ಲಿಸಲಾಯಿತು.
ಒಂದು ವೇಳೆ ಕದ್ದ ದನಗಳು ಜೀವಂತವಿದ್ದರೇ ಅವುಗಳನ್ನು ಸುರಕ್ಷಿತವಾಗಿ ಅವುಗಳ ಹಟ್ಟಿಗೆ ತಲುಪಿಸುವುದು, ಇಲ್ಲದಿದ್ದಲ್ಲಿ ಅವುಗಳನ್ನು ಕದ್ದೊಯ್ದು ಹತ್ಯೆ ಮಾಡಿದ, ಅವುಗಳ ಮಾಂಸ ಭಕ್ಷಿಸಿದ ಎಲ್ಲರಿಗೂ ಉಗ್ರ ಶಿಕ್ಷೆಯಾಗುವಂತೆ ನೋಡಿಕೊಳ್ಳುವುದು ಮತ್ತೆ ಮುಂದೆ ಇಂತಹ ಘಟನೆಗಳು ಮರುಕಳಿಸದಂತೆ ನೋಡಿಕೊಳ್ಳುವಂತೆ ದೈವಕ್ಕೆ ಮೊರೆ ಸಲ್ಲಿಸಲಾಯಿತು.
ಪರ್ಕಳ: ಗೋವಿನ ಅಂತ್ಯಸಂಸ್ಕಾರ
ಶನಿವಾರ ಉಡುಪಿ ತಾಲೂಕಿನ ಪರ್ಕಳದ ಪರೀಕ ಎಂಬಲ್ಲಿ ಭಾನುವಾರ ಮಧ್ಯಾಹ್ನ ದನದ ಶವವೊಂದು ಪತ್ತೆಯಾಗಿತ್ತು. ಈ ದನವನ್ನು ಮಾಂಸಕ್ಕಾಗಿ ಕೊಂದು ನಂತರ ಉಳಿದ ಅಸ್ತಿಪಂಜರವನ್ನು ತಂದು ಇಲ್ಲಿನ ನಿವಾಸಿಯೊಬ್ಬರ ಖಾಸಗಿ ಭೂಮಿಗೆ ಎಸೆಯಲಾಗಿತ್ತು. ಈ ವಿಷಯ ತಿಳಿದ ಪರ್ಕಳದ ಕಾಂಗ್ರೆಸ್ ಕಾರ್ಯಕರ್ತರು ಸೋಮವಾರ ದನದ ಶವದ ವೈದ್ಯಕೀಯ ಪರೀಕ್ಷೆ ನಡೆಸಿ, ಭೂಮಾಲೀಕ ಒಪ್ಪಿಗೆಯ ಮೇರೆಗೆ ಪೂಜೆ ಇತ್ಯಾದಿಗಳನ್ನು ಸಲ್ಲಿಸಿ, ಅದು ಪತ್ತೆಯಾದ ಸ್ಥಳದಲ್ಲಿ ದಫನ ಮಾಡಲಾಯಿತು. ಕಾಂಗ್ರೆಸ್ ಕಾರ್ಯಕರ್ತರಾದ ರಾಮದಾಸ ನಾಯಕ್ ಪರ್ಕಳ, ಗಣೇಶ್ರಾಜ್ ಸರಳೇಬೆಟ್ಟು, ಉದ್ಯಮಿ ಮೋಹನದಾಸ್ ನಾಯಕ್ ಮುಂತಾದವರು ಇದ್ದರು.