ಅಂತರ್ ಕಾಲೇಜು ಚೆಸ್: ವಿವಿ ಕಾಲೇಜು, ಎಲೋಶಿಯಸ್ಗೆ ಪ್ರಶಸ್ತಿ
ಉಡುಪಿ: ಇಲ್ಲಿನ ಎಂಜಿಎಂ ಕಾಲೇಜಿನಲ್ಲಿ ನಡೆದ ಮಂಗಳೂರು ವಿವಿ ಮಟ್ಟದ ಅಂತರ್ ಕಾಲೇಜು ಚೆಸ್ ಪಂದ್ಯಾಟದಲ್ಲಿ ಮಂಗಳೂರು ಯುನಿವರ್ಸಿಟಿ ಕಾಲೇಜು ಪುರುಷರ ವಿಭಾಗದಲ್ಲಿ ಮತ್ತು ಮಹಿಳೆಯರ ವಿಭಾಗದಲ್ಲಿ ಮಂಗಳೂರಿನ ಸೈಂಟ್ ಎಲೋಶಿಯಸ್ ಕಾಲೇಜು ಚಾಂಪಿಯನ್ಶಿಪ್ ಪ್ರಶಸ್ತಿ ಗೆದ್ದುಕೊಂಡಿವೆ. ಬೋರ್ಡ್ ಚಾಂಪಿಯನ್ಶಿಪ್ ಪ್ರಶಸ್ತಿಯನ್ನು ಎರಡೂ ವಿಭಾಗಗಳಲ್ಲೂ ಎಂಜಿಎಂ ಕಾಲೇಜು ಗೆದ್ದುಕೊಂಡಿತು.
ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ಅಂಬಲಪಾಡಿ ದೇವಳದ ಧರ್ಮದರ್ಶಿ ಡಾ.ನಿ. ವಿಜಯ ಬಲ್ಲಾಳ ಪ್ರಶಸ್ತಿ ಪ್ರದಾನ ಮಾಡಿದರು. ಸಮಾರಂಭದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲ ಡಾ.ಎನ್. ಹಾಲಾ ನಾಯ್ಕ್ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಮಂಗಳೂರು ವಿವಿ ದೈಹಿಕ ಶಿಕ್ಷಣ ವಿಭಾಗ ನಿರ್ದೇಶಕ ಡಾ.ಎಚ್. ನಾಗಲಿಂಗಪ್ಪ, ಎಂಜಿಎಂ ಕಾಲೇಜಿನ ವಿದ್ಯಾರ್ಥಿ ಕ್ಷೇಮಪಾಲನಾ ಅಧಿಕಾರಿ ಪ್ರೊ. ಲೀಲಾವತಿ, ದೈಹಿಕ ಶಿಕ್ಷಣ ನಿರ್ದೇಶಕಕಾದ ಕೆ.ಎಲ್. ಸಿದ್ದರಾಮಣ್ಣ ಮತ್ತು ಸತೀಶ್ ಕುಮಾರ್ ಹೆಗ್ಡೆ, ವಿದ್ಯಾರ್ಥಿ ನಾಯಕ ವಿಕಾಸ್ ತಿಂಗಳಾಯ, ಕ್ರೀಡಾ ಕಾರ್ಯದರ್ಶಿ ಕಾರ್ತಿಕ್ ವೇದಿಕೆಯಲ್ಲಿದ್ದರು.
ವಿದ್ಯಾರ್ಥಿನಿ ಸೌಜನ್ಯ ಸ್ವಾಗತಿಸಿದರು. ಅರ್ಜುನ್ ಭಟ್ ವಂದಿಸಿದರು. ಕೀರ್ತಿ ನಿರೂಪಿಸಿದರು.