ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಉಡುಪಿ

ಐಎಸ್‌ಪಿಆರ್‌ಎಲ್ 2ನೇ ಹಂತಕ್ಕೆ ಸ್ಥಳೀಯರ ವಿರೋಧ

Vishwanath S
Updated On : 5 Sept 2013, 11:24 am

ಕಾಪು: ಇಲ್ಲಿನ ಪಾದೂರು ಗ್ರಾಮದಲ್ಲಿ ನಿರ್ಮಾಣ ಹಂತದಲ್ಲಿರುವ ಕೇಂದ್ರ ಸರ್ಕಾರ ಸ್ವಾಮ್ಯಕ್ಕೊಳಪಟ್ಟ ಐ.ಎಸ್.ಪಿ.ಆರ್.ಎಲ್. ಯೋಜನೆಯ 2ನೇ ಹಂತದ ವಿಸ್ತರಣೆಗೆ ಸ್ಥಳೀಯ ಕೆಲವು ನಾಯಕರಿಂದ ವಿರೋಧ ವ್ಯಕ್ತವಾಗಿದೆ.
ಪಾದೂರು ಗ್ರಾ.ಪಂ.ನಲ್ಲಿ ಈಗಾಗಲೇ ನಿರ್ಮಾಣ ಹಂತದಲ್ಲಿರುವ, ತುರ್ತು ಸಂದರ್ಭದಲ್ಲಿ ಬಳಸುವುದಕ್ಕೆ ಅನುಕೂಲವಾಗುವಂತೆ ಭೂಮಿಯಡಿ ಕಚ್ಚಾ ಪೆಟ್ರೋಲಿಯಂ ತೈಲವನ್ನು ಸಂಗ್ರಹಿಸಿಡುವ ಇಂಡಿಯನ್ ಟ್ರಾಟಜಿಕ್ ಪೆಟ್ರೋಲಿಯಂ ರಿಸಾರ್ವಾಯರ್ ಲಿಮಿಟೆಡ್ (ಐ.ಎಸ್.ಪಿ.ಆರ್.ಎಲ್.)ನ 2ನೇ ಹಂತದ ವಿಸ್ತರಣೆಯನ್ನು ಕೇಂದ್ರ ಸರ್ಕಾರ ಘೋಷಿಸಿದೆ. ಈ ಹಿನ್ನೆಲೆಯಲ್ಲಿ ಸ್ಥಳೀಯರ ಭೂಮಿಯನ್ನು ಸ್ವಾಧೀನ ಪಡಿಸಿಕೊಳ್ಳುವ ಪ್ರಕ್ರಿಯೆ ಆರಂಭವಾಗಿದೆ.
ಈ ಹಿನ್ನೆಲೆಯಲ್ಲಿ ಪಾದೂರು- ಕುತ್ಯಾರು- ಕಳತ್ತೂರು ಗ್ರಾಮ ಜನಜಾಗೃತಿ ಸಮಿತಿಯೊಂದು ಅಸ್ತಿತ್ವಕ್ಕೆ ಬಂದಿದ್ದು, 2ನೇ ಹಂತದ ವಿಸ್ತರಣೆಯನ್ನು ವಿರೋಧಿಸುವುದಾಗಿ ಸಮಿತಿಯ ಪರವಾಗಿ ಉದ್ಯಮಿ ಸುರೇಶ್ ಶೆಟ್ಟಿ ಗುರ್ಮೆ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಬಿಜೆಪಿ ನಾಯಕ ಡಿ.ವಿ. ಸದಾನಂದ ಗೌಡ ಅವರು ರಾಜ್ಯದ ಮುಖ್ಯಮಂತ್ರಿಯಾಗಿದ್ದಾಗ 2ನೇ ಹಂತದ ವಿಸ್ತರಣೆಗೆ ಅವಕಾಶ ನೀಡುವುದಿಲ್ಲ ಎಂದು ಹೇಳಿದ್ದರು. ಆದರೆ, ಈಗ ಕೇಂದ್ರ ಯುಪಿಎ ಸರ್ಕಾರದ ಪೆಟ್ರೋಲಿಯಂ ಖಾತೆಯ ರಾಜ್ಯ ಸಚಿವೆ ಪನಬಾಕ ಲಕ್ಷ್ಮೀ 2ನೇ ಹಂತದ ವಿಸ್ತರಣೆಗೆ ಭೂ ಸ್ವಾಧೀನ ಪ್ರಕ್ರಿಯೆಯನ್ನು ಘೋಷಿಸಿದ್ದಾರೆ. ಒಂದು ವೇಳೆ ಇಂತಹ ಪ್ರಕ್ರಿಯೆ ಆರಂಭವಾದರೆ ಅದನ್ನು ತಡೆಯಲಾಗುವುದು ಎಂದು ತಿಳಿಸಿದರು.
1ನೇ ಹಂತದ ಯೋಜನೆಗೆ ದೇಶದ ಹಿತದೃಷ್ಟಿಯನ್ನು ಗಮನದಲ್ಲಿರಿಸಿ ಸ್ವಯಿಚ್ಚೆಯಿಂದ ಸ್ಥಳೀಯರು ತಮ್ಮ ಭೂಮಿಯನ್ನು ಬಿಟ್ಟುಕೊಟ್ಟಿದ್ದಾರೆ. 1ನೇ ಹಂತಕ್ಕೆ ತೋಕೂರಿನಿಂದ ಪಾದೂರುವರೆಗಿನ ಪೈಪುಲೈನ್ ಹಾಗೂ ನಂದಿಕೂರಿನಿಂದ ಪಾದೂರುವರೆಗಿನ ಹೈಟೆನ್ಷನ್ ವಿದ್ಯುತ್ ಲೈನ್‌ಗಾಗಿ ಮತ್ತೇ ನೂರಾರು ಎಕ್ರೆ ಭೂಸ್ವಾಧೀನ ನಡೆಸಲಾಗುತ್ತದೆ. 2ನೇ ಹಂತಕ್ಕೆ ಮತ್ತೇ ಸಾವಿರಾರು ಎಕ್ರೆ ಭೂಮಿ ಸ್ವಾದೀನ ಮಾಡಬೇಕಾಗುತ್ತದೆ. ಇದರಿಂದ ಸ್ಥಳೀಯ ಕೃಷಿಕರಿಗೆ, ಜನಸಾಮಾನ್ಯರಿಗೆ ಈ ಯೋಜನೆಯನ್ನು ಸ್ವಾಗತಿಸಿದ್ದೇ ತಪ್ಪು ಎಂಬ ಭಾವನೆ ಬಂದಿದೆ. ಸರ್ಕಾರ ಕೊಡುವ ಜುಜುಬಿ ಪರಿಹಾರಕ್ಕಾಗಿ ಭೂಮಿ ಕಳೆದುಕೊಂಡು ಸಣ್ಣ ಹಿಡುವಳಿದಾರರು ಸಂಪೂರ್ಣ ನಿರ್ಗತಿಕರಾಗಲಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದರು.
ಸುದ್ದಿಗೋಷ್ಠಿಯಲ್ಲಿ ಪೈಯಾರು ಶಿವರಾಮ ಶೆಟ್ಟಿ, ಕುತ್ಯಾರು ನವೀನ್ ಶೆಟ್ಟಿ, ಕಳತ್ತೂರು ವಿಶ್ವನಾಥ ಅಮೀನ್, ಅರುಣ್ ಶೆಟ್ಟಿ ಪಾದೂರು, ನಿತ್ಯಾನಂದ ಶೆಟ್ಟಿ, ಉಮೇಶ್ ಶೆಟ್ಟಿ ಕಳತ್ತೂರು ಮತ್ತಿತರ ಜನಜಾಗೃತಿ ಸಮಿತಿಯ ಪದಾಧಿಕಾರಿಗಳು, ಸದಸ್ಯರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement