ಅಕ್ಟೋಬರ್ 2ನೇ ವಾರ ರಸ್ತೆ ರಿಪೇರಿಗೆ ನಿರ್ಧಾರ
ಉಡುಪಿ: ಉಡುಪಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಬರುವ ರಾಜ್ಯ ಹೆದ್ದಾರಿ ಜಿಲ್ಲಾ ಮುಖ್ಯ ರಸ್ತೆಗಳು, ನಗರಸಭೆ ಹಾಗೂ ಗ್ರಾಮೀಣ ರಸ್ತೆಗಳಲ್ಲಿ ಈ ವರ್ಷ ಅತೀ ಮಳೆಯ ಕಾರಣ ಬಹಳ ಹೊಂಡಗಳು ಉಂಟಾಗಿವೆ. ಆದರೆ ಇನ್ನೂ ಮಳೆ ಬರುತ್ತಿರುವುದರಿಂದ ಈಗಲೇ ಹೊಂಡಗಳನ್ನು ಮುಚ್ಚಿದಲ್ಲಿ ತೇವಾಂಶದಿಂದಾಗಿ ಬಾಳಿಕೆ ಬರುವುದಿಲ್ಲ, ಆದ್ದರಿಂದ ಎಲ್ಲಾ ರಸ್ತೆಗಳ ಹೊಂಡಗಳನ್ನು ಮಳೆ ಕಡಿಮೆಯಾದ ಮೇಲೆ ಅಂದರೇ ಅಕ್ಟೋಬರ್ 2ನೇ ವಾರದ ನಂತರ ಮುಚ್ಚಲಾಗುವುದು ಎಂದು ಉಡುಪಿ ಶಾಸಕ ಪ್ರಮೋದ್ ಮಧ್ವರಾಜ್ ಅವರ ಅಧ್ಯಕ್ಷತೆಯಲ್ಲಿ ಶಾಸಕರ ಕಚೇರಿಯಲ್ಲಿ ನಡೆದ ಅಧಿಕಾರಗಳ ಸಭೆಯಲ್ಲಿ ನಿರ್ಧರಿಸಲಾಗಿದೆ.
ಸಭೆಯಲ್ಲಿ ಲೋಕೋಪಯೋಗಿ ಇಲಾಖೆಯ ಕಾರ್ಯನಿರ್ವಾಹಕ ಎಂಜಿನಿಯರ್ ಎಸ್. ಕೆ. ಚಂದ್ರಶೇಖರ್, ಸ.ಕಾ.ಎಂಜಿನಿಯರ್ ಕೆ. ವೇದವ್ಯಾಸ ತಂತ್ರಿ, ನಗರಸಭೆ ಆಯುಕ್ತ ಶ್ರೀಕಾಂತ್ ರಾವ್, ಬಂದರು ಮತ್ತು ಮೀನುಗಾರಿಕಾ ಇಲಾಖೆ ಕಾ.ಎಂಜಿನಿಯರ್ ಜಗದೀಶ್ ಭಟ್, ಪಂಚಾಯತ್ ರಾಜ್ ಇಲಾಖೆಯ ಕಾ.ಎಂಜಿನಿಯರ್ ಪಿ.ರಾಜಾ, ಸ.ಕಾ. ಎಂಜಿನಿಯರ್ ಡಿ.ವಿ.ಹೆಗಡೆ ಮತ್ತು ಜೂನಿಯರ್ ಎಂಜಿನಿಯರುಗಳು ಉಪಸ್ಥಿತರಿದ್ದರು.