ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಉಡುಪಿ

ಎನ್‌ಪಿಆರ್, ಆಧಾರ್ ಎರಡೂ ಒಂದೇ: ಡಿಸಿ

Lingaraj Badiger
Updated On : 7 Sept 2013, 12:00 pm

ಮಣಿಪಾಲ: ಗ್ರಾಪಂಗಳಲ್ಲಿ ರಾಷ್ಟ್ರೀಯ ಜನಸಂಖ್ಯಾ ನೋಂದಣಿ(ಎನ್.ಪಿ.ಆರ್.) ಯೋಜನೆಯಡಿ ಫೋಟೋ ತೆಗೆಸಿಕೊಂಡಿರುವವರು ಮತ್ತೇ ಅಂಚೆಕಚೇರಿಗಳಲ್ಲಿ ಆಧಾರ್ ಕಾರ್ಡ್ ಯೋಜನೆಯಡಿ ಫೋಟೋ ತೆಗೆಸಿಕೊಳ್ಳಬೇಕಾಗಿಲ್ಲ, ಅದೆರಡೂ ಒಂದೇ ಆಗಿದೆ ಎಂದು ಉಡುಪಿ ಜಿಲ್ಲಾಧಿಕಾರಿ ಡಾ.ಎಂ.ಟಿ. ರೇಜು ಸ್ಪಷ್ಟೀಕರಿಸಿದ್ದಾರೆ.
ಕೇಂದ್ರ ಸರ್ಕಾರ ನೇರ ನಗದು ವರ್ಗಾವಣೆ (ಡಿ.ಬಿ.ಟಿ.) ಯೋಜನೆಯಡಿ ಅಡುಗೆ ಅನಿಲಕ್ಕೆ ದೊರೆಯುವ ಸಬ್ಸಿಡಿ ಪಡೆಯಲು ಆಧಾರ್ ಕಾರ್ಡ್ ಕಡ್ಡಾಯಗೊಳಿಸಲಾಗಿರುವುದರಿಂದ, ಅಡುಗೆ ಅನಿಲ ಗ್ರಾಹಕರು ಶುಕ್ರವಾರ ಅಂಚೆ ಕಚೇರಿಗಳಲ್ಲಿ ಆಧಾರ್ ಕಾರ್ಡ್‌ಗೆ ಫೋಟೋ ತೆಗೆಸಲು ಮುಗಿಬಿದ್ದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಅವರು ಸುದ್ದಿಗೋಷ್ಠಿಯಲ್ಲಿ ಈ ಸ್ಪಷ್ಟೀಕರಣ ನೀಡಿದ್ದಾರೆ.
ಈ ಸಬ್ಸಿಡಿ ಪಡೆಯಲು, ಯಾರ ಹೆಸರಿನಲ್ಲಿ ಅಡುಗೆ ಅನಿಲ ಸಂಪರ್ಕ ಇದೆಯೋ ಅವರು ತಮ್ಮ ಆಧಾರ್  ಕಾರ್ಡ್ ಸಂಖ್ಯೆಯನ್ನು ಅವರ ಬ್ಯಾಂಕಿನ ಖಾತೆಗೆ ಲಗತ್ತಿಸಬೇಕು. ಅಂತವರ ಖಾತೆಗೆ ಮಾತ್ರ ಸಬ್ಸಿಡಿ ಜಮೆ ಆಗುತ್ತದೆ. ಅಕ್ಟೋಬರ್ 1ರಿಂದ ಈ ಡಿ.ಬಿ.ಟಿ. ಸೌಲಭ್ಯ ಜಾರಿಗೆ ಬರುತ್ತದೆ. ಉಡುಪಿ ಜಿಲ್ಲೆಯಲ್ಲಿ ಶೇ.80ಕ್ಕೂ ಹೆಚ್ಚು ಜನರ ಎನ್.ಪಿ.ಆರ್. ಮತ್ತು ಆಧಾರ್ ಕಾರ್ಡ್ ನೊಂದಣಿ ಆಗಿರುವುದರಿಂದ ಡಿ.ಬಿ.ಟಿ.ಗೆ ಉಡುಪಿ ಜಿಲ್ಲೆಯನ್ನು ಪ್ರಾಯೋಗಿಕವಾಗಿ ಆರಿಸಿಕೊಳ್ಳಲಾಗಿದೆ.
ಉಡುಪಿ ಜಿಲ್ಲೆಯ ಸುಮಾರು 12 ಲಕ್ಷ ಜನಸಂಖ್ಯೆಯಲ್ಲಿ 8.6 ಲಕ್ಷ ಮಂದಿ ಈಗಾಗಲೇ ಎನ್.ಪಿ.ಆರ್. ಯೋಜನೆಯಡಿ ಫೋಟೋ ತೆಗೆಸಿಕೊಂಡಿದ್ದಾರೆ. ಸುಮಾರು 50 ಸಾವಿರ ಮಂದಿ ಅಂಚೆ ಕಚೇರಿಗಳಲ್ಲಿ ಅಧಾರ್ ್ಕಾರ್ಡ್ ಯೋಜನೆಯಡಿ ಫೋಟೋ ತೆಗೆಸಿಕೊಂಡಿದ್ದಾರೆ. ಒಟ್ಟು 6.60 ಲಕ್ಷ ಮಂದಿಗೆ ಕಾರ್ಡ್ ಈಗಾಗಲೇ ಸಿದ್ಧವಾಗಿದ್ದು, ರು. 2.50 ಲಕ್ಷ ಮಂದಿಗೆ ಕಾರ್ಡು ಈಗಾಗಲೇ ವಿತರಣೆಯಾಗಿದೆ. ಉಳಿದವರಿಗೆ ಹಂತಹಂತವಾಗಿ ವಿತರಿಸಲಾಗುತ್ತಿದೆ. ಕಾರ್ಡು ಸಿಗದವರು ಆಧಾರ್ ಯೋಜನೆ ವೆಬ್‌ಸೈಟ್ ಯುಐಡಿಎಐ.ಜಿಓವಿ.ಎನ್‌ಐಸಿ.ಐಎನ್‌ನಲ್ಲಿ ಆಧಾರ್ ಸಂಖ್ಯೆಯನ್ನು ಡೌನ್‌ಲೋಡ್ ಸಾಧ್ಯವಾದರೇ ಪ್ರಿಂಟ್ ಮಾಡಿಕೊಂಡು, ಅದನ್ನು ಬ್ಯಾಂಕಿಗೆ ತೆಗೆದುಕೊಂಡು ಹೋಗಿ ಖಾತೆಗೆ ಲಗತ್ತಿಸಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಅವರು ತಿಳಿಸಿದ್ದಾರೆ.
ಎನ್.ಪಿ.ಆರ್. ಅಥವಾ ಆಧಾರ್ ಕಾರ್ಡ್ ನೋಂದಣಿ ಮಾಡಿಸಿಕೊಳ್ಳದವರು ಗಾಬರಿಯಾಗಬೇಕಾಗಿಲ್ಲ, ಆಧಾರ್ ಕಾರ್ಡ್ ಸಂಖ್ಯೆಯಲ್ಲಿ ಬ್ಯಾಂಕು ಖಾತೆಗೆ ಲಗತ್ತಿಸಲು 3 ತಿಂಗಳ ಅವಕಾಶ ಇದೆ.
ಅದರೊಳಗಾಗಿ ಉಡುಪಿ, ಕುಂದಾಪುರ, ಬೈಂದೂರು ಅಂಚೆ ಕಚೇರಿಗಳಲ್ಲಿ ಅಧಾರ್ ಕಾರ್ಡ್ ನೊಂದಣಿ (ಕುಟಂಬದ ಎಲ್ಲಾ ಸದಸ್ಯರೊಂದಿಗೆ ಹೋಗಿ ಫೋಟೋ ತೆಗೆಸಿಕೊಳ್ಳುವುದು) ಮಾಡಿಸಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಅವರು ತಿಳಿಸಿದ್ದಾರೆ.
ಉಡುಪಿ ಜಿಲ್ಲೆಯಲ್ಲಿ 3 ಅಡುಗೆ ಅನಿಲ ಕಂಪೆನಿಗಳ ಪೂರೈಕೆದಾರರಿದ್ದು, ಒಟ್ಟು 2.03 ಲಕ್ಷ ಮಂದಿ ಅಡುಗೆ ಅನಿಲ ಸಂಪರ್ಕ ಹೊಂದಿದ್ದಾರೆ.
ಈಗಾಗಲೇ ಜಿಲ್ಲೆಯಲ್ಲಿ 8.60 ಲಕ್ಷ ಜನರ ಎನ್.ಪಿ.ಆರ್ ಅಥವಾ ಅಧಾರ್ ನೋಂದಣಿಯಾಗಿದೆ.
 ಆದ್ದರಿಂದ ಬಹುತೇಕ ಅಡುಗೆ ಅನಿಲ ಸಂಪರ್ಕದಾರರ ಎನ್.ಪಿ.ಆರ್. ಅಥವಾ ಆಧಾರ್ ನೋಂದಣಿಯಾಗಿದೆ ಎಂಬ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದರು.
ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದ ಶಾಸಕ ಪ್ರಮೋದ್ ಮಧ್ವರಾಜ್, ಕೇಂದ್ರ ಸರ್ಕಾರ ಜನರ ಲಾಭಕ್ಕಾಗಿಯೇ ಈ ಎನ್.ಪಿ.ಆರ್. ಅಥವಾ ಅಧಾರ್ ಕಾರ್ಡ್ ಯೋಜನೆಯನ್ನು ಮತ್ತು ಡಿ.ಬಿ.ಟಿ. ಸೌಲಭ್ಯವನ್ನು ಜಾರಿಗೆ ತರಲಾಗಿದೆ.
ಈ ಹಿನ್ನೆಲೆಯಲ್ಲಿ  ಜನರು ಉದಾಸೀನ ಮಾಡದೇ ಆಧಾರ್ ಕಾರ್ಡು ನೋಂದಣಿ ಮಾಡಿಸಿಕೊಂಡು, ಬ್ಯಾಂಕಿನ ಮೂಲಕ ಸಬ್ಸಿಡಿ ಸೌಲಭ್ಯ ಪಡೆಯಬೇಕು ಎಂದು ಜಿಲ್ಲೆಯ ಜನರಲ್ಲಿ ಮನವಿ ಮಾಡಿಕೊಂಡರು.

ದಾಖಲೆ ಸಂಗ್ರಹ ನಿರಂತರ ಪ್ರಕ್ರಿಯೆ
ಹೋಬಳಿ ಮಟ್ಟದಲ್ಲಿ ಎನ್.ಪಿ.ಆರ್. ಕೇಂದ್ರಗಳು ಚಾಲನೆಯಲ್ಲಿದ್ದು ಅಲ್ಲಿಯೂ ಆಧಾರ್ ಕಾರ್ಡ್ ನೊಂದಾಯಿಸಿಕೊಳ್ಳಬಹುದು, ಉಡುಪಿ, ಬೈಂದೂರು, ಕುಂದಾಪುರ ನಗರ ಪ್ರದೇಶದಲ್ಲಿ ಅಂಚೆ ಕಚೇರಿಗಳಲ್ಲಿ ನೋಂದಾಯಿಸಿಕೊಳ್ಳಬಹುದು. ಈ ಪ್ರಕ್ರಿಯೆ ನಿರಂತರವಾಗಿ ನಡೆಯುತ್ತಿರುತ್ತದೆ.  ಗ್ರಾಪಂ ಮಟ್ಟದಲ್ಲಿ ಎನ್.ಪಿ.ಆರ್.ನಲ್ಲಿ ನೋಂದಾಯಿಸಿಕೊಂಡಿದ್ದವರಲ್ಲಿ 17,000 ಮಂದಿಯ ನೊಂದಣಿ ತಾಂತ್ರಿಕ ಕಾರಣಗಳಿಂದಾಗಿ ತಿರಸ್ಕೃತಗೊಂಡಿದೆ. ಅಂತಹವರಿಗೆ ಮೊಬೈಲ್ ಸಂದೇಶ ಬರುತ್ತದೆ. ಮತ್ತೆ ನೋಂದಾಯಿಸಿಕೊಳ್ಳಬೇಕು.   

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement