ಜಪಾನ್ನಲ್ಲಿ ಡಾ.ನಡಿಬೈಲು ಉಪನ್ಯಾಸ
ಸುಳ್ಯ: ಜಪಾನ್ನಲ್ಲಿ ಆಯುರ್ವೇದ ಉಪನ್ಯಾಸಗಳನ್ನು ನೀಡುವಂತೆ ಅಲ್ಲಿನ ಆಯುರ್ವೇದ ಸಂಸ್ಥೆ ಡಾ. ನಡಿಬೈಲು ಉದಯ ಶಂಕರ ಅವರನ್ನು ಆಹ್ವಾನಿಸಿದೆ. ಸೆ. 12ರಂದು ಜಪಾನ್ಗೆ ತೆರಳಲಿರುವ ಅವರು ಅಲ್ಲಿ ಆಯುರ್ವೇದ ಉಪನ್ಯಾಸ ಮತ್ತು ತರಬೇತಿ ಶಿಬಿರಗಳನ್ನು ನಡೆಸಲಿದ್ದಾರೆ. ಆಯುರ್ವೇದವನ್ನು ವಿಶ್ವವ್ಯಾಪಿಯಾಗಿಸುವ ಪ್ರಯತ್ನದಲ್ಲಿರುವ ಜಪಾನ್ನ ಡಾ. ಉಬೆಬ ಕಜುಮೊ, ಡಾ. ಉಸುಮಿ ಮೊದಲಾದ ಪ್ರತಿಷ್ಟಿತ ಗಣ್ಯರೊಂದಿಗೆ ಅವರು ಸಮಾಲೋಚಿಸಲಿದ್ದಾರೆ. ಟೊಕಿಯೊದ ನಿಹೊನ್ಬಶಿಯ ನಿಪ್ಪನ್ ಆಯುರ್ವೇದ ಸ್ಕೂಲ್ನಲ್ಲಿ ಮತ್ತು ನಹಶಿಯ ಲಿಬ್ರೆ ಗಾರ್ಡನ್ ಹೋಟೆಲ್ಗಳಲ್ಲಿ ಅವರು ತರಬೇತಿ ಶಿಬಿರಗಳನ್ನು ನಡೆಸಲಿದ್ದಾರೆ. ಪ್ರಸ್ತುತ ಸುಳ್ಯದ ಕೆ.ವಿ.ಜಿ. ಆಯುರ್ವೇದ ಕಾಲೇಜಿನಲ್ಲಿ ಅವರು ಪ್ರಾಧ್ಯಾಪಕರಾಗಿದ್ದು, ಅನೆಕ ಆಯುರ್ವೇದ ಪುಸ್ತಕಗಳನ್ನು ಬರೆದಿದ್ದಾರೆ. ಅವರು ಬರೆದ ಶಾಲಾಕ್ಯ ತಂತ್ರ ದೇಶಾದ್ಯಂತ ಆಯುರ್ವೇದ ಪದವಿ ತರಗತಿಗಳಿಗೆ ಪಠ್ಯ ಪುಸ್ತಕವಾಗಿದ್ದು, ಅವರು ಸಂಪಾದಿಸಿದ ನೇತ್ರ ಪ್ರಕಾಶಿಕ ಸಮಾಲೋಚನ ಗ್ರಂಥವಾಗಿದೆ. ರಾಜೀವ್ ಗಾಂಧಿ ಆರೋಗ್ಯ ವಿ.ವಿ.ಯಲ್ಲಿ ಈ ತನಕ 8 ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಅವರು ಸಂಶೋಧನಾ ಮಾರ್ಗದರ್ಶಕರಾಗಿದ್ದು, ಪದವಿ ಪರೀಕ್ಷೆಗಳಿಗೆ ಮೌಲ್ಯಮಾಪಕರಾಗಿಯೂ ಕಾರ್ಯ ನಿರ್ವಹಿಸಿದ್ದಾರೆ. ಗುಜರಾತ್ ಆಯುರ್ವೇದ ವಿವಿ, ರಾಜೀವ್ ಗಾಂಧಿ ಆರೋಗ್ಯ ವಿವಿ, ರಾಷ್ಟ್ರಿಯ ಗ್ರಾಮೀಣ್ ಆರೋಗ್ಯ ಮಿಶನ್, ಆಯುಷ್ ಇಲಾಖೆ ಮೊದಲಾದ ಸಂಸ್ಥೆಗಳು ಪ್ರಶಸ್ತಿ- ಪುರಸ್ಕಾರಗಳಿಂದ ಗೌರವಿಸಿವೆ.
ಕಾಂತಾವರ: ನಾಳೆ ತಿಂಗಳ ಸರಣಿ ಕಾರ್ಯಕ್ರಮ
ಕಾಂತಾವರ: ಕಾಂತಾವರ ಕನ್ನಡ ಸಂಘದಿಂದ ಸಾಹಿತ್ಯ ಸಂಸ್ಕೃತಿ ಸಂವರ್ಧನ ಕಾರ್ಯಕ್ರಮದ ಎರಡನೇ ವರ್ಷದ ನಮ್ಮ ಕನ್ನಡ ನಮ್ಮದು ತಿಂಗಳ ಸರಣಿ ಕಾರ್ಯಕ್ರಮ ಸೆ. 8ರಂದು ಮಧ್ಯಾಹ್ನ 3 ಗಂಟೆಗೆ ಕಾಂತಾವರ ರಥಬೀದಿಯಲ್ಲಿರುವ ಕನ್ನಡ ಭವನದ ಪಂಪ ಮಹಾಕವಿ ಸಭಾಭವನದಲ್ಲಿ ನಡೆಯಲಿದೆ. ಬೆಳ್ಳೆ ರಾಮಚಂದ್ರರಾಯರ ಕಾದಂಬರಿ ಚಿರವಿರಹಿ ಕುರಿತು ಸುಬ್ರಾಯ ಚೊಕ್ಕಾಡಿ ವಿಷಯ ಮಂಡಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.
--