'ಚಿರವಿರಹಿ' ವಿಶಿಷ್ಟ ಕೃತಿ: ಸುಬ್ರಾಯ
ಕಾಂತಾವರ: ದಾಂಪತ್ಯ ಕೃತಕತೆಯ ಚೌಕಟ್ಟಿನಿಂದ ಸಹಜ ಪ್ರೀತಿಯೆಡೆಗೆ ಸಾಗುವ ಪ್ರೀತಿಯ ಮಹಾಪ್ರಯಾಣದ ರೂಪಕ ಹೊಂದಿರುವ ವಿಭಿನ್ನ ಕಥಾಶೈಲಿಯ ವಿಶಿಷ್ಟ ಕೃತಿಯೇ ಬೆಳ್ಳೆ ರಾಮಚಂದ್ರ ರಾಯರ 'ಚಿರವಿರಹಿ' ಕಾದಂಬರಿ ಎಂದು ವಿಮರ್ಶಕ ಸುಬ್ರಾಯ ಚೊಕ್ಕಾಡಿ ಅಭಿಪ್ರಾಯಪಟ್ಟಿದ್ದಾರೆ. ಇತ್ತೀಚೆಗೆ, ಕಾಂತಾವರ ಕನ್ನಡ ಸಂಘದ 'ನಮ್ಮ ಕನ್ನಡ ನಮ್ಮದು' ತಿಂಗಳ ಸರಣಿ ಕಾರ್ಯಕ್ರಮದಲ್ಲಿ ಅವರು ಬೆಳ್ಳೆ ರಾಮಚಂದ್ರರಾಯರ 'ಚಿರವಿರಹಿ' ಕಾದಂಬರಿ ಕುರಿತು ಮಾತನಾಡಿದರು. ಶಿವರಾಮ ಕಾರಂತ, ಕುವೆಂಪು, ಅನಕೃ, ತ.ರಾ.ಸು., ಕಟ್ಟೀಮನಿ ಮುಂತಾದ ಕಾದಂಬರಿಕಾರರ ಪ್ರಭಾವವಾಗಲೀ, ನವೋದಯ ಕಾಲಘಟ್ಟದಲ್ಲಿದ್ದ ಪ್ರಗತಿಶೀಲ ಚಿಂತನೆಗಳಾಗಲಿ ಇವರ ಮೇಲೆ ಪ್ರಭಾವ ಬೀರದೆ ಭಿನ್ನವಾಗಿ ತಮ್ಮದೇ ಆದ ಬೌದ್ಧಿಕ, ಭಾವನಾತ್ಮಕ ಮತ್ತು ಪ್ರಗತಿಶೀಲ ದೃಷ್ಟಿಕೋನಗಳಿಂದ ಕೂಡಿದ ಕಾದಂಬರಿ 'ಚಿರವಿರಹಿ'ಎಂದರು. ಸಾಹಿತಿ ಡಾ.ನಾ. ಮೊಗಸಾಲೆ ಇದ್ದರು.