ನಿಟ್ಟೆಯಲ್ಲಿ ಶಿಕ್ಷಕರ, ಎಂಜಿನಿಯರ್ಗಳ ದಿನಾಚರಣೆ
ನಿಟ್ಟೆ: ತಾಂತ್ರಿಕ ಸಮಸ್ಯೆಗಳಿಗೆ ಸರಿಯಾದ ಪರಿಹಾರ ಕಂಡುಹುಡುಕುವ ಕೌಶಲ್ಯ ಬೆಳೆಸಿಕೊಂಡು ಹಣ ಸದ್ವಿನಿಯೋಗಿಸಲು ಕಲಿತಲ್ಲಿ ಪ್ರತಿಯೊಬ್ಬರೂ ಜೀವನದಲ್ಲಿ ಯಶಸ್ಸು ಗಳಿಸಬಹುದು ಎಂದು ಉದ್ಯಮಿ ಗುಜ್ಜಾಡಿ ರಾಮದಾಸ್ ಎನ್. ನಾಯಕ್ ಅಭಿಪ್ರಾಯಪಟ್ಟಿದ್ದಾರೆ.
ನಿಟ್ಟೆ ಮಹಾಲಿಂಗ ಅಡ್ಯಂತಾಯ ಸ್ಮಾರಕ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಮತ್ತು ಸರ್.ಎಂ. ವಿಶ್ವೇಶ್ವರಯ್ಯ ಸ್ಮರಣೆಗಾಗಿ ಇತ್ತೀಚೆಗೆ ಹಮ್ಮಿಕೊಂಡ ಶಿಕ್ಷಕರ ಮತ್ತು ಎಂಜಿನಿಯರ್ಗಳ ದಿನಾಚರಣೆಯಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
ಕೈಗಾರಿಕಾ ನೀತಿಯಿಂದಾಗಿ ಚಿನ್ನಾಭರಣಗಳ ಕೈಗಾರಿಕೆ ಕಡೆಗಣಿಸಲ್ಪಟ್ಟಿದೆ. ಆದರೆ, ಇದು ದೇಶದ ಎರಡನೆಯ ದೊಡ್ಡ ರಫ್ತು ಉದ್ಯಮ. ಇದಕ್ಕೆ ಉತ್ತೇಜನ ನೀಡುವ ಅವಶ್ಯಕತೆ ಇದೆ ಎಂದು ಹೇಳಿದರು.
ನಿಟ್ಟೆ ಎಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲ ಡಾ. ನಿರಂಜನ್ ಎನ್. ಚಿಪ್ಲೂಣ್ಕರ್ ಅಧ್ಯಕ್ಷತೆ ವಹಿಸಿದ್ದರು.
ಸಂಸ್ಥೆಯ 2012- 13 ನೇ ಸಾಲಿನಲ್ಲಿ ಪಿ.ಎಚ್.ಡಿ ಪದವಿ ಪಡೆದ ಶಿಕ್ಷಕರಾದ ಡಾ. ಶ್ರೀನಾಥ್ ಶೆಟ್ಟಿ, ಡಾ. ರಾಜೇಶ್ ಶೆಟ್ಟಿ, ಡಾ. ನರಸಿಂಹ ಮರಕಾಲ, ಡಾ. ರಾಧಾಕೃಷ್ಣ ಮತ್ತು ಡಾ. ಚೇತನ್ ಡಿ.ಎಂ. ಅವರನ್ನು ಅಭಿನಂದಿಸಲಾಯಿತು.