ಹಾವುಗಳ ಬಗ್ಗೆ ಮಾಹಿತಿ, ಪ್ರಾತ್ಯಕ್ಷಿಕೆ
ಉಡುಪಿ: ನಿಸರ್ಗದ ಸಮಸ್ತ ಜೀವರಾಶಿಗಳು ಒಂದನ್ನೊಂದು ಅವಲಂಬಿಸಿ ಬದುಕು ಸಾಗಿಸುವುದು ಪ್ರಕೃತಿಯ ವೈಶಿಷ್ಟ್ಯ. ಬುದ್ಧಿ ಜೀವಿ ಎನಿಸಿಕೊಂಡ ಮನುಷ್ಯ ಮಾತ್ರ ನಿಸರ್ಗಕ್ಕೆ ನಿಯಮಕ್ಕೆ ವಿರುದ್ಧವಾಗಿ ಜೀವಿಸುವುದು ದುರಂತ ಎಂದು ಉರಗ ತಜ್ಞ ಗುರುರಾಜ್ ಸನಿಲ್ ಹೇಳಿದ್ದಾರೆ.
ಬೆಳ್ಮಣ್ನ ಜೇಸಿಸ್ ಸಪ್ತಾಹದ ಅಂಗವಾಗಿ ಶ್ರೀ ಲಕ್ಷ್ಮೀ ಜನಾರ್ದನ ವಿದ್ಯಾಸಂಸ್ಥೆಯಲ್ಲಿ ಹಾವುಗಳ ಬಗ್ಗೆ ಮಾಹಿತಿ ಮತ್ತು ಪ್ರಾತ್ಯಕ್ಷಿಕೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಹಿರಿಯರು, ದುರಾಸೆ ಮತ್ತು ಮೂಢನಂಬಿಕೆಗಳಿಗೆ ಜೋತುಬಿದ್ದು ಮಕ್ಕಳಲ್ಲಿ ಹಾವುಗಳ ಬಗ್ಗೆ ಪ್ರಕೃತಿಗೆ ವಿರುದ್ಧವಾದ, ಅವೈಜ್ಞಾನಿಕ ವಿಚಾರಗಳನ್ನು ತುಂಬಿ ಭಯದ ವಾತಾವರಣ ನಿರ್ಮಿಸಿದ್ದಾರೆ. ಅದನ್ನು ಹೋಗಲಾಡಿಸಿ ಹಾವುಗಳಿಗೂ ನಮ್ಮಂತೆ ಬದುಕುವ ಸ್ವಾತಂತ್ರ್ಯವಿದೆ. ಅದನ್ನು ಕಸಿದುಕೊಳ್ಳುವ ಹಕ್ಕು ಯಾರಿಗೂ ಇಲ್ಲ ಎಂದು ಅರಿಯಬೇಕು ಎಂದರು.
ಬಳಿಕ, ವಿವಿಧ ಜಾತಿಯ ಹಾವುಗಳನ್ನು ಕೈಗೆ ಕೊಟ್ಟು ಅವುಗಳ ಜೀವನ ಕ್ರಮ ತಿಳಿಸಿ ಜಾಗೃತಿ ಮೂಡಿಸಿ ಪ್ರಥಮ ಚಿಕಿತ್ಸೆಯ ಬಗ್ಗೆ ಮಾಹಿತಿ ನೀಡಿದರು.
ಜಿ.ಪಂ. ಸದಸ್ಯ ಸುಪ್ರೀತ್ ಶೆಟ್ಟಿ ಉದ್ಘಾಟಿಸಿದರು. ರೋಟರಿ ಜಿಲ್ಲಾ ಮಾಹಿತಿ ಹಕ್ಕು ಸಮಿತಿ ಜಿಲ್ಲಾಧ್ಯಕ್ಷ ಬಿ. ಪುಂಡಲೀಕ ಮರಾಠೆ, ಜೇಸಿ ವಲಯ ನಿರ್ದೇಶಕ ಶ್ರೀನಾಥ್ ಬಂಗೇರ, ಸಂಸ್ಥೆಯ ಪ್ರಾಂಶುಪಾಲ ಭುಜಂಗ ಶೆಟ್ಟಿ, ಜೇಸಿಐ ಘಟಕದ ಅಧ್ಯಕ್ಷ ಪುನಾರು ರಘುನಾಥ್ ನಾಯಕ್, ಸುಭಾಸ್ ಕುಮಾರ್ ಇದ್ದರು.