ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಉಡುಪಿ

ಶಿವಾಜಿನಗರದ ಮಾನಸಿಕ ಅಸ್ವಸ್ಥ ಕುಂದಾಪುರದಲ್ಲಿ ಪತ್ತೆ

Lingaraj Badiger
Updated On : 16 Sept 2013, 11:42 am

ಕುಂದಾಪುರ: ಕಳೆದ ಮಾರ್ಚ್‌ನಲ್ಲಿ ಬೆಂಗಳೂರಿನ ತನ್ನ ಮನೆಯಿಂದ ಕಾಣೆಯಾಗಿದ್ದ ಯುವಕನೊಬ್ಬ ಬರೋಬ್ಬರಿ ಏಳು ತಿಂಗಳುಗಳ ಕಾಲ ಕಾಲ್ನಡಿಗೆಯಲ್ಲೇ ಸವೆಸಿ ತೀರಾ ಮಾನಸಿಕ ಹಾಗೂ ದೈಹಿಕವಾಗಿ ಅಸ್ವಸ್ಥ ಸ್ಥಿತಿಯಲ್ಲಿ ಕುಂದಾಪುರದ ಮಸೀದಿ ಪರಿಸರದಲ್ಲಿ ಪತ್ತೆಯಾಗಿದ್ದಾನೆ. ಈತನನ್ನು ಸ್ಥಳೀಯರು ಹೆತ್ತವರ ಮಡಿಲು ಸೇರಿಸಿದ್ದಾರೆ.
ಪ್ರಕರಣದ ವಿವರ: ಬೆಂಗಳೂರು ಶಿವಾಜಿನಗರ ಟ್ಯಾನರಿಯ ಪಿಎನ್‌ಟಿ ಕಾಲೋನಿಯ ರಿಯಲ್ ಎಸ್ಟೇಟ್ ಉದ್ಯಮಿ ಶಾಬುದ್ದೀನ್ ಅವರ ಹಿರಿಯ ಮಗ ಅಜರುದ್ದೀನ್(26) ಕಳೆದ ಮಾರ್ಚ್‌ನಲ್ಲಿ ಮನೆಯಿಂದ ಏಕಾಏಕಿ ಕಾಣೆಯಾಗಿದ್ದ. ಹೈಸ್ಕೂಲಿಗೆ ಹೋಗುತ್ತಿದ್ದ ಅಜರುದ್ದೀನ್ ಎಂಟು ವರ್ಷಗಳ ಹಿಂದೆ ಸಂಭವಿಸಿದ್ದ ಅಪಘಾತವೊಂದರಲ್ಲಿ ಸ್ವಲ್ಪ ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದು ಬಳಿಕ ಮನೆಯವರ ಪಾಲನೆಯಲ್ಲೇ ಇದ್ದ. ಕಳೆದ ಮಾರ್ಚ್‌ನಲ್ಲಿ ಈತ ಮನೆಯವರ ಕಣ್ತಪ್ಪಿಸಿ ತೊಟ್ಟ ಬಟ್ಟೆಯಲ್ಲೇ ಮನೆಯಿಂದ ಹೊರ ಬಂದು ಕಾಲ್ನಡಿಗೆಯಲ್ಲೇ ನಡೆಯುತ್ತಾ ಬಂದ ಈತ ತಲುಪಿದ್ದು ಕುಂದಾಪುರದ ಮಸೀದಿ ಪರಿಸರದಕ್ಕೆ.
ತೀರಾ ನಿತ್ರಾಣ ಸ್ಥಿತಿಯಲ್ಲಿ ಬಿದ್ದಿದ್ದ ಈತನನ್ನು ಗಮನಿಸಿದ ಸ್ಥಳೀಯ ಮುಸ್ಲಿಂ ವೆಲ್ಫೇರ್‌ನ ಸದಸ್ಯರು ಸಮಾಜ ಸೇವಕ ಅಬ್ಬು ಎಂಬವರ ನೇತೃತ್ವದಲ್ಲಿ ಯುವಕನನ್ನು ಉಪಚರಿಸಿ ಆತನಿಂದ ಬೆಂಗಳೂರಿನ ಅವನ ವಿಳಾಸವನ್ನು ಅಸ್ಪಷ್ಟ ರೀತಿಯಲ್ಲಿ ಪಡೆಯುವಲ್ಲಿ ಯಶಸ್ವಿಯಾಗಿದ್ದರು.
ಸ್ಥಳೀಯ ಕೋಲಾ ಬಶೀರ್ ಎಂಬವರು ಯುವಕನ ಫೋಟೋ ತೆಗೆದು ನೆಟ್ ಮೂಲಕ ಬೆಂಗಳೂರಿನಲ್ಲಿರುವ ತಮ್ಮ ಅಳಿಯ ಸಲೀಂಗೆ ರವಾನಿಸಿ ಈತನ ಬಗ್ಗೆ ಮಾಹಿತಿ ಕಲೆಹಾಕುವಂತೆ ತಿಳಿಸಿದ್ದರು. ಅದರಂತೆ ಸತತ ಹುಡುಕಾಟದ ಮೂಲಕ ಕೊನೆಗೂ ಅಜರುದ್ದೀನ್‌ನ ಹೆತ್ತವರನ್ನು ಸಂಪರ್ಕಿಸಿದ ಸಲೀಂ ಅಜರುದ್ದೀನ್ ಕುಂದಾಪುರದಲ್ಲಿ ಪತ್ತೆಯಾಗಿರುವುದನ್ನು ತಿಳಿಸಿದ್ದರು. ತಮ್ಮ ಮಗನಿಗಾಗಿ ಹಲವಾರು ಕಡೆ ಹುಡುಕಾಡಿ ನಿರಾಶರಾಗಿದ್ದ ಹೆತ್ತವರು ಕೂಡಲೇ ಕುಂದಾಪುರಕ್ಕೆ ಆಗಮಿಸಿ ತಮ್ಮ ಮಗನೊಂದಿಗೆ ಬೆಂಗಳೂರಿಗೆ ತೆರಳಿದರು.

ಯಕ್ಷಗಾನ ಕಲಾವಿದ ಜನಾರ್ದನ ರಾವ್ ನಿಧನ
ಬೆಳ್ತಂಗಡಿ: ಯಕ್ಷಗಾನ ಕಲಾವಿದ, ಕನ್ಯಾಡಿ ನಿವಾಸಿ ಜನಾರ್ದನ ರಾವ್ (70) ಇತ್ತೀಚೆಗೆ ಸ್ವಗೃಹದಲ್ಲಿ ನಿಧನರಾದರು. ಧರ್ಮಸ್ಥಳ ಕ್ಷೇತ್ರದಲ್ಲಿ ದೇವಳದ ದಫೇದಾರರಾಗಿ 37 ವರ್ಷ ಕಾಲ ಕರ್ತವ್ಯ ನಿರ್ವಹಿಸಿ ನಿವೃತ್ತರಾಗಿದ್ದ ಅವರು ಉತ್ತಮ ಕೃಷಿಕರಾಗಿದ್ದರು. ಧರ್ಮಸ್ಥಳ ಚಿಕ್ಕ ಮೇಳದಲ್ಲಿ ಬಣ್ಣದ ವೇಷಧಾರಿಯಾಗಿ ಹಾಗೂ ಹವ್ಯಾಸಿ ಕಲಾವಿದರಾಗಿಯೂ ಜನಪ್ರಿಯರಾಗಿದ್ದ ಜನಾರ್ದನ ರಾವ್, ಚೆಂಡೆವಾದನವನ್ನೂ ಮಾಡುತ್ತಿದ್ದರು. ಯುವ ಭಾಗವತ ಮಹೇಶ ಕನ್ಯಾಡಿ ಸೇರಿದಂತೆ ಇಬ್ಬರು ಗಂಡು, ಇಬ್ಬರು ಹೆಣ್ಣು ಮಕ್ಕಳನ್ನು ಅಗಲಿದ್ದಾರೆ.
ಜನಾರ್ದನ ರಾವ್ ಅವರ ಕಲಾಸೇವೆಯನ್ನು ಗುರುತಿಸಿ ಕಳೆದ ಮೇ ತಿಂಗಳಲ್ಲಿ ಅರ್ಕುಳ ಸುಬ್ರಾಯ ಆಚಾರ್ಯ ಪ್ರತಿಷ್ಠಾನ ಗೇರುಕಟ್ಟೆ ಮತ್ತು ಸೇವಾಭಾರತಿ ಕನ್ಯಾಡಿ ವತಿಯಿಂದ ಸನ್ಮಾನಿಸಲಾಗಿತ್ತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement