ಕಾರ್ಕಳ ರಸ್ತೆ ಅಭಿವೃದ್ಧಿ ಶೀಘ್ರ: ಜಯಪ್ರಕಾಶ್ ಹೆಗ್ಡೆ
ಕಾರ್ಕಳ: ಇಲ್ಲಿನ ರಸ್ತೆ ಅಭಿವೃದ್ಧಿ ಶೀಘ್ರ ನಡೆಸಲಾಗುವುದು ಎಂದು ಜಯಪ್ರಕಾಶ್ ಹೆಗ್ಡೆ ತಿಳಿಸಿದರು.ಪುರಸಭೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಿಲ್ಲೆಯ ಅಭಿವೃದ್ಧಿಗೆ ಅವಶ್ಯವಿರುವ ಅನುದಾನ ಒದಗಿಸಲು ಕೇಂದ್ರ ಸಚಿವ ಆಸರ್ ಫೆರ್ನಾಂಡಿಸ್ ಮತ್ತು ವೀರಪ್ಪ ಮೊಯ್ಲಿ ಅವರನ್ನು ಭೇಟಿ ಮಾಡಿ ಈಗಾಗಲೇ ಮನವಿ ಮಾಡಲಾಗಿದೆ ಎಂದು ತಿಳಿಸಿದರು. ಆಗುಂಬೆ ಘಾಟಿ ರಸ್ತೆಯ ಅಭಿವೃದ್ಧಿಗೆ ರಾಷ್ಟ್ರೀಯ ಹೆದ್ದಾರಿಗಳ ಅಭಿವೃದ್ಧಿಗೆ ಕೇಂದ್ರ ಸಚಿವ ಆಸರ್ ಫೆರ್ನಾಂಡಿಸ್ ಅವರಲ್ಲಿ ಅನುದಾನ ಒದಗಿಸುವಂತೆ ಮನವಿ ಮಾಡಲಾಗಿದೆ. ಇಲ್ಲಿನ ಪುರಸಭೆಗೆ ಪುರಭವನ ನಿರ್ಮಿಸಲು ಎರಡು ಕೋಟಿ ನೆರವು ಹಾಗೂ ಆಸ್ಪತ್ರೆಗೆ ವಿವಿಧ ಸೌಲಭ್ಯ ಒದಗಿಸಲು ನೆರವು ನೀಡಲು ಅವರು ಒಪ್ಪಿರುವುದಾಗಿ ತಿಳಿಸಿದರು. ಮಾಜಿ ಶಾಸಕ ಎಚ್. ಗೋಪಾಲ ಭಂಡಾರಿ ಮಾತನಾಡಿ, ಕಾರ್ಕಳ ಗೊಮ್ಮಟ ಮಸ್ತಕಾಭಿಷೇಕ 2014- 15ರಲ್ಲಿ ನಡೆಯಲಿರುವುದರಿಂದ ಪಟ್ಟಣದ ಅಭಿವೃದ್ಧಿಗೆ ವಿಶೇಷ ಅನುದಾನ ನೀಡಲು ಸರ್ಕಾರಕ್ಕೆ ಮನವಿ ಮಾಡಲಾಗಿದೆ. ಪುರಸಭೆಯ ವ್ಯಾಪ್ತಿಯಲ್ಲಿ ಸ್ಥಗಿತಗೊಂಡ ರಸ್ತೆ ಹಾಗೂ ಇನ್ನಿತರ ಕಾಮಗಾರಿ ಮುಂದುವರಿಯಲಿದೆ ಎಂದು ತಿಳಿಸಿದರು.
ಶಿಕ್ಷಕರ ದಿನಾಚರಣೆ
ಉಡುಪಿ: ಮಣಿಪಾಲ ಅಕಾಡೆಮಿ ಅಂಗಸಂಸ್ಥೆ, ಬೈಲೂರಿನ ವಾಸುದೇವ ಕೃಪಾ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಗುರುವಾರ ಶಿಕ್ಷಕರ ದಿನ ಆಚರಿಸಲಾಯಿತು. ಮುಖ್ಯೋಪಾಧ್ಯಾಯಿನಿ ಅಮಿತಾಂಜಲಿ ಸ್ವಾಗಸಿದರು. ಶಾಲಾ ಸಮನ್ವಯಾಧಿಕಾರಿ ಯು. ಕಲ್ಯಾಣಿ ಪೈ ದಿನದ ಮಹತ್ವದ ಕುರಿತು ಮಾತನಾಡಿದರು. ಇದೇ ಸಂದರ್ಭ ನಿವೃತ್ತ ಶಿಕ್ಷಕಿ ರೀಟಾ ಹೆಂತಟ್ ಅವರನ್ನು ಗೌರವಿಸಲಾಯಿತು. ಶಾಲಾ ರಕ್ಷಕ- ಶಿಕ್ಷಕ ಸಂಘದ ಅಧ್ಯಕ್ಷ ಗಣೇಶ್ ಉರಾಳ್ ಕಾರ್ಯಕ್ರಮ ನಡೆಸಿಕೊಟ್ಟರು. ವಿವಿಧ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಿಸಲಾಯಿತು.