ಪ್ರಭಾಕರ ಮಯ್ಯಗೆ ಗುಜರಾತ್ ಸರ್ಕಾರದ ಕಿಸಾನ್ ಪುರಸ್ಕಾರ
ಬೆಳ್ತಂಗಡಿ: ಬೆಳ್ತಂಗಡಿ ತಾಲೂಕಿನ ಕೃಷಿಕರೊಬ್ಬರಿಗೆ ಗುಜರಾತ್ ಸರ್ಕಾರ ಶ್ರೇಷ್ಠ ಕಿಸಾನ್ ಪುರಸ್ಕಾರ ನೀಡಿ ಗೌರವಿಸಿದೆ.
ಸೆ.9 ಮತ್ತು 10ರಂದು ಗುಜರಾತ್‌ನ ಗಾಂಧಿನಗರದಲ್ಲಿ ನಡೆದ ವೈಬ್ರೆಂಟ್ ಗುಜರಾತ್ ಗ್ಲೋಬಲ್ ಅಗ್ರಿಕಲ್ಚರ್ ಸಮಿತ್‌ನಲ್ಲಿ ಬೆಳ್ತಂಗಡಿ ತಾಲೂಕಿನ ನಡ ಗ್ರಾಮದ ಸುರ್ಯ ಮನೆಯ ಪ್ರಗತಿಪರ ಕೃಷಿಕ ಪ್ರಭಾಕರ ಮಯ್ಯ ಅವರಿಗೆ 51,000 ನಗದು, ಸ್ಮರಣಿಕೆ, ಪ್ರಮಾಣ ಪತ್ರ ನೀಡಿ ಪುರಸ್ಕರಿಸಲಾಗಿದೆ.
ಸೆ.9 ರಂದು ನಡೆದ ಸಮಾರಂಭದಲ್ಲಿ ಅಲ್ಲಿನ ಕೃಷಿ ಮಂತ್ರಿ ಬಾಬುರಾವ್ ಬುಗಾರಿಯಾ ಅವರು ಮುಖ್ಯಮಂತ್ರಿ ನರೇಂದ್ರ ಮೋದಿ ಸಮ್ಮುಖದಲ್ಲಿ ದೇಶದ ವಿವಿಧ ರಾಜ್ಯಗಳ 468 ರೈತರಿಗೆ ಈ ಪುರಸ್ಕಾರ ನೀಡಲಾಗಿದೆ. ರಾಜ್ಯದಿಂದ ಆಯ್ಕೆ ಮಾಡಲಾಗಿದ್ದ 120 ಮಂದಿ ಕೃಷಿಕರಲ್ಲಿ ಗುಜರಾತ್‌ಗೆ ತೆರಳಿದ್ದು 96 ಮಂದಿ. ಅಲ್ಲಿನ ಪ್ರಶಸ್ತಿ ಆಯ್ಕೆ ಸಮಿತಿ ರಾಜ್ಯದ ಪ್ರತಿ ಜಿಲ್ಲೆಗೆ ಒಬ್ಬರಂತೆ ಗುರುತಿಸಿ 24 ಮಂದಿಯನ್ನು ಆರಿಸಿದ್ದು ಈ ಪೈಕಿ ಪ್ರಭಾಕರ ಮಯ್ಯ ದ.ಕ ಜಿಲ್ಲೆಯಿಂದ ಆಯ್ಕೆಯಾಗಿದ್ದಾರೆ. ದ.ಕ. ಜಿಲ್ಲೆಯಿಂದ 4 ಮಂದಿಯನ್ನು ಸಮ್ಮೇಳನದಲ್ಲಿ ಭಾಗವಹಿಸಲು ಆಯ್ಕೆ ಮಾಡಲಾಗಿತ್ತು.
ಅತಿಥಿ ಉಪನ್ಯಾಸಕ: ಪ್ರಭಾಕರ ಮಯ್ಯ ಸುರ್ಯದಲ್ಲಿ 6 ಎಕರೆ ಜಮೀನನ್ನು ಹೊಂದಿದ್ದು ಸುಮಾರು 18 ವರ್ಷಗಳಿಂದ ಸಮಗ್ರ ಕೃಷಿ ಪದ್ಧತಿಯನ್ನು ಅಳವಡಿಸಿಕೊಂಡು ಬಂದಿದ್ದಾರಲ್ಲದೆ ಬೆಳ್ತಂಗಡಿಯ ಕೃಷಿ ವಿಜ್ಞಾನ ತರಬೇತಿ ಕೇಂದ್ರದಲ್ಲಿ ಹಲವಾರು ವರ್ಷಗಳಿಂದ ಕಾರ್ಯ ಅತಿಥಿ ಉಪನ್ಯಾಸಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಸ್ವಂತ ಕೃಷಿಯನ್ನು ಆಧುನಿಕ ತಂತ್ರಜ್ಞಾನದ ಮೂಲಕ ಯಶಸ್ವಿಯಾಗಿ ನಿರ್ವಹಿಸುತ್ತಾ ಬಂದಿದ್ದಾರೆ.
ಗುಜರಾತ್ ಸರ್ಕಾರ 24 ರೈತರಿಗೆ 51,000 ನಗದು ಸಹಿತ ಪ್ರಶಸ್ತಿ ನೀಡಿ ಮತ್ತು ಪ್ರಯಾಣ, ವಸತಿ ಖರ್ಚನ್ನೂ ಭರಿಸಿದ್ದಲ್ಲದೆ, ಬೆಂಗಳೂರಿನಿಂದ ಸ್ವಗ್ರಾಮಗಳಿಗೆ ಪ್ರಯಾಣಿಸಲು ನಗದನ್ನೂ ನೀಡಿದೆ. ಅಲ್ಲದೆ ಪ್ರಶಸ್ತಿ ಸ್ವೀಕರಿಸಲು ಆಗಮಿಸಿದ ಎಲ್ಲ ರೈತರಿಗೂ ನರ್ಮದಾ ಪ್ರಾಜೆಕ್ಟ್, ಸಾಬರಮತಿ ಆಶ್ರಮ, ಅಮುಲ್ ಕಾರ್ಖಾನೆ ಮೊದಲಾದ ಕಡೆಗೆ ಪ್ರವಾಸ ಆಯೋಜಿಸಿತ್ತು.
--