ಮದುವೆಯಾಗಿ ಪತ್ನಿ ಮರೆತ ಪತಿ ಪೊಲೀಸ್ ವಶಕ್ಕೆ
ಉಪ್ಪಿನಂಗಡಿ: ಬಾಳ ಸಂಗಾತಿಯಾಗಿ ಬದುಕು ನೀಡುತ್ತೇನೆಂದು ಮದುವೆಯಾಗಿ ಬಳಿಕ ಪತ್ನಿ ಎನ್ನುವುದನ್ನೇ ಮರೆತ ಪತಿರಾಯನನ್ನು ಸ್ಥಳೀಯರು ಮಂಗಳೂರಿನಲ್ಲಿ ಪತ್ತೆ ಹಚ್ಚಿ ಪೊಲಿಸರಿಗಪ್ಪಿಸಿದ ಘಟನೆ ಕಡಬದಲ್ಲಿ ನಡೆದಿದೆ.
ಕಡಬ ಗ್ರಾಮದ ಕಳಾರ ನಿವಾಸಿ ಸುಲೈಮಾನ್ ಎಂಬವರ ಪುತ್ರಿ ಪೌಝೀಯ ಎಂಬಾಕೆಯನ್ನು 5 ವರ್ಷದ ಹಿಂದೆ ಮಂಗಳೂರು ಮೂಲದ ಅಯೂಬ್ ಎಂಬಾತನಿಗೆ ಮದುವೆ ಮಾಡಿಕೊಡಲಾಗಿತ್ತು. ಮದುವೆಯಾಗಿ ಸುಮಾರು ಒಂದೂವರೆ ವರ್ಷಗಳ ಕಾಲ ಹೆಂಡತಿಯ ಮನೆಗೆ ಆಗಾಗ ಬಂದು ಹೋಗುತ್ತಿದ್ದ. ಅಯೂಬ್ ಪತ್ನಿಯ ಮೇಲೆ ನಿರಾಸಕ್ತಿ ಹೆಚ್ಚಿದಂತೆ ಪತ್ನಿಯ ಮನೆಗೆ ಬಾರದೆ, ಪತ್ನಿಯನ್ನು ತನ್ನ ಮನೆಗೂ ಕರೆದೊಯ್ಯದೆ ನಾಪತ್ತೆಯಾಗಿದ್ದ. ಪೌಝೀಯಳ ಬಗ್ಗೆ ಕಾಳಜಿ ವಹಿಸಿದ ಕಳಾರದ ಸ್ತ್ರೀ ಶಕ್ತಿ ಸಂಘಟನೆಗಳ ಸಲಹೆಯೊಂದಿಗೆ ಅಯೂಬ್ ಮಂಗಳೂರಿನಲ್ಲಿರುವ ಬಗ್ಗೆ ಮಾಹಿತಿ ಪಡೆದುಕೊಂಡ ಕಳಾರದ ಕೆಲವು ಮಂದಿ ಮಂಗಳೂರಿಗೆ ತೆರಳಿ ಅಲ್ಲಿ ಆತನನ್ನು ವಶಕ್ಕೆ ತೆಗೆದುಕೊಂಡು ಕಡಬ ಪೊಲೀಸರಿಗೆ ಒಪ್ಪಿಸಿದ್ದಾರೆ. ಈ ಮಧ್ಯೆ, ಅಯೂಬ್ ಬೇರೆ ಮದುವೆಯಾಗಿರುವ ಬಗ್ಗೆಯೂ ಮಾಹಿತಿ ದೊರಕಿದ್ದು ಪೊಲೀಸರ ವಿಚಾರಣೆ ನಡೆಯುತ್ತಿದೆ.