ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಉಡುಪಿ

ಕರಾವಳಿಯಲ್ಲಿ ಗುಡುಗು, ಬಿರುಸು ಮಳೆ: ಮನೆ, ಕಾರ್ಖಾನೆಗೆ ಹಾನಿ

Lingaraj Badiger
Updated On : 21 Sept 2013, 12:12 pm

ಉಡುಪಿ/ಮಂಗಳೂರು: ಕಳೆದ ಕೆಲವು ದಿನಗಳಿಂದ ಕಣ್ಣಾಮುಚ್ಚಾಲೆ ಆಡುತ್ತಿದ್ದ ಮಳೆ ಶುಕ್ರವಾರ ಮತ್ತೆ ಬಿರುಸಾಗಿದೆ. ಜಿಲ್ಲೆಯಾದ್ಯಂತ ಶುಕ್ರವಾರ ಜೋರಾಗಿ ಮಳೆಯಾಗಿದ್ದು, ಸಂಜೆಯವರೆಗೂ ನಿರಂತರವಾಗಿ ಸುರಿದಿದೆ. ಮಧ್ಯಾಹ್ನ ಸುಮಾರು 2 ಗಂಟೆ ಸಮಯಕ್ಕೆ ದಟ್ಟ ಮೋಡ ಕವಿದಿದ್ದರಿಂದ ನಗರವಿಡಿ ಭಾಗಶಃ ಕತ್ತಲು ಕವಿದ ವಾತಾವರಣ ಕಂಡುಬಂತು.
ಜೊತೆಗೆ, ಮಳೆ ಜೋರಾಗಿ ಸುರಿದಿದ್ದರಿಂದ ಚರಂಡಿಯಲ್ಲಿ ನೀರು ಹರಿಯಲಾಗದೆ ರಸ್ತೆ ಮೇಲೆ ತುಂಬಿ ಹರಿದು ವಾಹನಗಳು ಒಡಾಡಲು ಕಷ್ಟವಾಯಿತು.
ಮಳೆಯಿಂದ ಹಾನಿ: ಶುಕ್ರವಾರ ಸುರಿದ ಮಳೆಯಿಂದಾಗಿ ಕಾರ್ಕಳ ತಾಲೂಕಿನ ಕಸಬ ಗ್ರಾಮದಲ್ಲಿ ಬಂಗ್ಲೆಗುಡ್ಡೆ ನಿವಾಸಿ ಸೆಬಿಸಾ ಅವರ ಮನೆಯು ಆವರಣ ಗೋಡೆ ಕುಸಿದು ಸುಮಾರು ರು. 5 ಸಾವಿರ ನಷ್ಟ ಸಂಭವಿಸಿದೆ. ಪಳ್ಳಿಯ ಕುಣಾಕರ ಶೆಟ್ಟಿ ಮನೆ ಮಳೆಯಿಂದಾಗಿ ಕುಸಿದು ಸಂಪೂರ್ಣ ಹಾನಿಯಾಗಿದೆ. ಸುಮಾರು ರು. 25 ಸಾವಿರ ನಷ್ಟ ಸಂಭವಿಸಿದೆ.  ಹೆಬ್ರಿಯ ಚಾರ ಎಂಬಲ್ಲಿನ ಗೇರು ಬೀಜ ಕಾರ್ಖಾನೆಗೆ ಹೊದಿಸಿದ್ದ ಸಿಮೆಂಟ್ ಶೀಟುಗಳು ಶುಕ್ರವಾರ ಮುಂಜಾನೆ ಬೀಸಿದ ಭಾರಿ ಗಾಳಿ ಮಳೆಗೆ ಹಾರಿ ಹೋಗಿದೆ. ಹೆಬ್ರಿ ರಮಣ ನಾಯಕ್ ಅವರ ಮಾಲೀಕತ್ವದ ಕಾರ್ಖಾನೆ ಇದಾಗಿದ್ದು, 40 ಶೀಟುಗಳು ಹಾರಿಹೋಗಿ ಕಾರ್ಖಾನೆಯೊಳಗೆ ಶೇಖರಿಸಿಟ್ಟಿದ್ದ ಅಪಾರ ಪ್ರಮಾಣ ಗೇರು ಬೀಜಗಳು ಮಳೆಗೆ ಒದ್ದೆಯಾಗಿದೆ. ಇದರಿಂದ ಸುಮಾರು ರು. 7 ಲಕ್ಷ ನಷ್ಟ ಉಂಟಾಗಿದೆ ಎನ್ನಲಾಗಿದೆ. ಸ್ಥಳಕ್ಕೆ ಅಧಿಕಾರಿಗಳು ಭೇಟಿ ನೀಡಿದ್ದಾರೆ.
ಮಳೆ ವಿವರ: ಉಡುಪಿ ಜಿಲ್ಲೆಯಲ್ಲಿ ಶುಕ್ರವಾರ ಮುಂಜಾನೆವರೆಗೂ 24 ಗಂಟೆಗಳಲ್ಲಿ ಸರಾಸರಿ 53.16 ಮಿ.ಮೀ. ಮಳೆಯಾಗಿದೆ.
ಉಡುಪಿ ತಾಲೂಕಿನಲ್ಲಿ 45.3 ಮಿ.ಮೀ., ಕುಂದಾಪುರ ತಾಲೂಕಿನಲ್ಲಿ 66  ಮಿ.ಮೀ., ಕಾರ್ಕಳ ತಾಲೂಕಿನಲ್ಲಿ 48.2 ಮಿ.ಮೀ. ಮಳೆಯಾಗಿದೆ.
ಮಂಗಳೂರು ವರದಿ: ಮಿಂಚು ಗುಡುಗು ಗಾಳಿಯ ಅಬ್ಬರದಿಂದ ಕೂಡಿದ ಮತ್ತೆ ಜೂನ್ ತಿಂಗಳನ್ನು ನೆನಪಿಸುವಂಥ ಧಾರಾಕಾರ ಮಳೆ ಜಿಲ್ಲೆಯಲ್ಲಿ ಶುಕ್ರವಾರ ಮುಂಜಾನೆಯಿಂದಲೇ ಸುರಿದಿದೆ. ಮಧ್ಯಾಹ್ನದವರೆಗೆ ಬಿಡದೆ ಸುರಿದಿತ್ತು. ಧಾರಾಕಾರ ಮಳೆಗೆ ತಗ್ಗು ಪ್ರದೇಶದಲ್ಲಿ ಕೃತಕ ನೆರೆ ಸೃಷ್ಟಿಯಾಗಿತ್ತು. ಮಧ್ಯಾಹ್ನ ನಂತರ ಮಳೆ ಅಬ್ಬರ ಕಮ್ಮಿಯಾಗಿದ್ದು, ಮೋಡ ಕವಿದ ವಾತಾವರಣವಿತ್ತು. ಆದರೆ ಎಲ್ಲೂ ಹಾನಿ ಸಂಭವಿಸಿಲ್ಲ.  ಶುಕ್ರವಾರ ಬೆಳಗ್ಗಿನವರೆಗೆ ಬೆಳ್ತಂಗಡಿಯಲ್ಲಿ 41.2 ಮಿ.ಮೀ. ಅಧಿಕ ಮಳೆ ಸುರಿದಿದೆ.
ಮಳೆ ವಿವರ: ಮೂಡುಬಿದಿರೆ- 32.2 ಮಿ.ಮೀ., ಕಬಕ- 13.4 ಮಿ.ಮೀ., ಬಂಟ್ವಾಳ- 13.2 ಮಿ.ಮೀ., ಪುತ್ತೂರು- 14.5 ಮಿ.ಮೀ., ಮಂಗಳೂರು- 11.1 ಮಿ.ಮೀ. ಮಳೆ ದಾಖಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement