ವಸತಿ ಯೋಜನೆ: ಅಪೂರ್ಣ ಕಾಮಗಾರಿ
ಕಾರ್ಕಳ: ಕಾರ್ಕಳ ತಾಲೂಕಿನಲ್ಲಿ ಕಳೆದ ಅನೇಕ ವರ್ಷಗಳಿಂದ ವಿವಿಧ ವಸತಿ ಯೋಜನೆಗಳಡಿ ಮನೆ ನಿರ್ಮಾಣ ಕೆಲಸ ನಡೆಯುತ್ತಲೇ ಇದೆ, ಕೆಲವು ಮನೆಗಳು ಪೂರ್ಣಗೊಂಡಿವೆ, ಕೆಲವು ಪ್ರಗತಿಯಲ್ಲಿದೆ. ಆದರೆ, ಮುಗಿಯುವುದು ಯಾವಾಗ ಎಂಬುದು ಗೊತ್ತಿಲ್ಲ.
2010- 11ರ ಸಾಲಿಗೆ ತಾಲೂಕಿಗೆ ಬಸವ ವಸತಿ ಯೋಜನೆಯಡಿ ಒಟ್ಟು 3,351 ಮನೆಗಳ ನಿರ್ಮಾಣದ ಗುರಿ ನೀಡಲಾಗಿತ್ತು. ಆದರೆ, ಮನೆ ಬೇಕು ಎಂದು ಬಡವರಿಂದ ಸಲ್ಲಿಕೆಯಾದ ಅರ್ಜಿಗಳು 1,714 ಮಾತ್ರ.
ಸಕಾಲದಲ್ಲಿ ಫಲಾನುಭವಿಗಳ ಆಯ್ಕೆಯಾಗದಿರುವುದು, ಫಲಾನುಭವಿಗಳ ಸಕಾಲದಲ್ಲಿ ಮನೆ ನಿರ್ಮಾಣ ಆರಂಭಿಸದಿರುವುದು ಇತ್ಯಾದಿ ಕಾರಣಗಳಿಂದ ಯೋಜನೆ ಮಂದಗತಿ ಹಿಡಿಯಿತು. ಯೋಜನೆ ಆರಂಭವಾಗಿ 3 ವರ್ಷ ಕಳೆದರೂ ಪೂರ್ಣಗೊಂಡಿರುವ ಮನೆಗಳ ಸಂಖ್ಯೆ 992 ಮಾತ್ರ. ಇನ್ನೂ 722 ಮನೆಗಳ ನಿರ್ಮಾಣದ ವಿವಿಧ ಹಂತದಲ್ಲಿವೆ. 2010- 11ರ ಯೋಜನೆಯೇ ಪೂರ್ಣಗೊಂಡಿಲ್ಲ, ನಂತರ 2 ವರ್ಷಗಳಲ್ಲಿ ಈ ಯೋಜನೆ ಜಾರಿಗೊಂಡಿಲ್ಲ.
ಇನ್ನು ಕೇಂದ್ರ ಸರ್ಕಾರದ ಅನುದಾನದ ಯೋಜನೆ ಇಂದಿರಾ ಆವಾಸ್ ಯೋಜನೆಯದ್ದೂ ಇದೆ ಕತೆ.
ಶೇ. 53 ಸಾಧನೆ ಮಾತ್ರ: 2011- 12ರಲ್ಲಿ ತಾಲೂಕಿಗೆ 218 ಮನೆ ನಿರ್ಮಾಣದ ಗುರಿ ಇತ್ತು. ಅದರಲ್ಲಿ ಎಲ್ಲಾ ಮನೆಗಳಿಗೂ ಫಲಾನುಭವಿಗಳ ಆಯ್ಕೆಯಾಗಿ ಅನುದಾನ ಮಂಜೂರಾಗಿದ್ದು, 116 ಮನೆಗಳು ಪೂರ್ಣಗೊಂಡಿವೆ, ಇನ್ನೂ 102 ಮನೆಗಳು ಬೇರೆ ಬೇರೆ ಹಂತದಲ್ಲಿ ನಿರ್ಮಾಣಗೊಳ್ಳುತ್ತಿವೆ. ಅಂದರೆ ಸಾಧನೆ ಶೇ. 53 ಮಾತ್ರ.
2012 - 13ರಲ್ಲಿ ತಾಲೂಕಿಗೆ ಗುರಿ ಬಹಳ ಸಣ್ಣದಿತ್ತು, ಒಟ್ಟು 144 ಮನೆಗಳು ಮಂಜೂರಾಗಿ, ಅವುಗಳಲ್ಲಿ 64 ಮನೆಗಳ ಪೂರ್ಣಗೊಂಡಿವೆ. 80 ಮನೆಗಳು ಪೂರ್ಣಗೊಳ್ಳಬೇಕಾಗಿವೆ. ಈ ಸಾಲಿನ ಸಾಧನೆ ಕೇವಲ ಶೇ. 44 ಮಾತ್ರ.
2013- 14ನೇ ಸಾಲಿಗೆ 313 ಮನೆಗಳ ನಿರ್ಮಾಣದ ಗುರಿ ಇದೆ. ಅರ್ಜಿ ಪಡೆದು, ಫಲಾನುಭವಿಗಳ ಆಯ್ಕೆಯಾಗಿ, ಮಂಜೂರಾತಿ ದೊರೆತು ನಿರ್ಮಾಣ ಕಾರ್ಯ ಇನ್ನಷ್ಟೇ ಆರಂಭವಾಗಬೇಕಾಗಿದೆ.
ಈ ವಸತಿ ಯೋಜನೆಗಳು ಮಂದಗತಿಯಲ್ಲಿ ನಡೆಯುವುದಕ್ಕೆ ಕಾರಣಗಳೂ ಇವೆ. ಸ್ಥಳೀಯ ಜನಪ್ರತಿನಿಧಿಗಳು ಫಲಾನುಭವಿಗಳ ಆಯ್ಕೆಯಲ್ಲಿ ಹೆಚ್ಚು ಮುತುವರ್ಜಿ ವಹಿಸದಿರುವುದು, ಪರಿಶಿಷ್ಟ ಜಾತಿ ಮತ್ತು ಪಂಗಡಗಳಿಗೆ ಮೀಸಲಾಗಿರುವ ಮನೆಗಳಿಗೆ ಅರ್ಜಿ ಬಾರದಿರುವುದು, ಆಗಾಗ ಬದಲಾಗುವ ಸರ್ಕಾರ ನೀತಿಗಳು ಕೂಡ ಕಾರಣವಾಗಿವೆ. ಆದರೆ, 2- 3 ವರ್ಷಗಳಲ್ಲಿಯೂ ಯೋಜನೆ ಪೂರ್ಣಗೊಳ್ಳುವುದಿಲ್ಲ ಎಂದರೆ ಸ್ಥಳೀಯ ಜಿ.ಪಂ., ತಾ.ಪಂ., ಗ್ರಾ.ಪಂ. ಸದಸ್ಯರು ಏನು ಮಾಡುತ್ತಿದ್ದಾರೆ ಎನ್ನುವುದೇ ಪ್ರಶ್ನಾರ್ಹವಾಗಿದೆ.