ಆಮೆಗತಿಯಲ್ಲಿ ವಸತಿ ಕಾಮಗಾರಿ
ಕುಂದಾಪುರ: ಕುಂದಾಪುರ ತಾಲೂಕಿನಲ್ಲಿ ಬಸವ ವಸತಿ ಹಾಗೂ ಇಂದಿರಾ ಆವಾಸ್ ಯೋಜನೆಯಡಿ ಮನೆಗಳ ನಿರ್ಮಾಣದ ಗುರಿ ದೊಡ್ಡದಿದ್ದರೂ, ಮನೆ ನಿರ್ಮಾಣ ಕಾರ್ಯ ಮಾತ್ರ ಬಹಳ ನಿಧಾನಗತಿಯಲ್ಲಿ ನಡೆಯುತ್ತಿದೆ. ಜೊತೆಗೆ ಹಿಂದಿನ ವರ್ಷಗಳಲ್ಲಿ ಮಂಜೂರಾದ ಕೆಲವು ಮನೆಗಳ ನಿರ್ಮಾಣ ಕಾರ್ಯವು ಇನ್ನೂ ಆರಂಭಿಕ ಹಂತದಲ್ಲಿದೆ.
ಬಸವ ವಸತಿ ಯೋಜನೆಯಡಿ ಕುಂದಾಪುರ ತಾಲೂಕಿಗೆ 2010- 11ನೇ ಸಾಲಿಗೆ ಒಟ್ಟು 3657 ಮನೆ ನಿರ್ಮಾಣದ ಗುರಿಯನ್ನು ನೀಡಲಾಗಿತ್ತು. ಇದರಲ್ಲಿ ಕೇವಲ 1,759 ಮನೆಗಳ ನಿರ್ಮಾಣ ಕಾರ್ಯ ಪೂರ್ಣಗೊಂಡಿದ್ದು, 1865 ಮನೆಗಳು ಪ್ರಗತಿ ಹಂತದಲ್ಲಿದೆ. 33 ಮನೆಗಳು ಕೆಲಸಗಳು ಇನ್ನೂ ಆರಂಭವಾಗಿಯೇ ಇಲ್ಲ. ನಂತರದ 2 ವರ್ಷಗಳಲ್ಲಿ ಈ ಯೋಜನೆ ಜಾರಿಯೇ ಆಗಿಲ್ಲ.
2013- 14ನೇ ಸಾಲಿಗೆ 1120 ಮನೆ ನಿರ್ಮಾಣದ ಗುರಿ ಹೊಂದಿದ್ದು, ಅರ್ಜಿ ಪಡೆದು, ಫಲಾನುಭವಿಗಳ ಆಯ್ಕೆಯಾಗಿ, ಮಂಜೂರಾತಿ ದೊರೆತು ನಿರ್ಮಾಣ ಕಾರ್ಯ ಇನ್ನಷ್ಟೇ ಆರಂಭವಾಗಬೇಕಾಗಿದೆ. ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಈಗಾಗಲೇ ತಲಾ 10 ಮನೆಗಳು ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ಮಂಜೂರಾಗಿದ್ದು, ಫಲಾನುಭವಿಗಳ ಆಯ್ಕೆ ಪ್ರಕ್ರಿಯೆ ನಡೆಯುತ್ತಿದೆ.
ಆಮೆಗತಿಯ ಇಂದಿರಾ ಆವಾಸ್: ಇನ್ನು ಇಂದಿರಾ ಅವಾಸ್ ಯೋಜನೆಯದ್ದು ಮಾತ್ರ ಆಮೆಗತಿಯ ಪ್ರಗತಿ. ಈ ಯೋಜನೆಯಲ್ಲಿ ಸಾಕಷ್ಟು ಮಂದಿ ಫಲಾನುಭವಿಗಳಿಗೆ ಮನೆಗಳು ಮಂಜೂರಾಗಿದ್ದರೂ, ಮನೆಗಳ ನಿರ್ಮಾಣ ಕಾರ್ಯ ಪೂರ್ಣಗೊಂಡಿಲ್ಲದೆ ಇರುವುದರಿಂದ ಫಲಾನುಭವಿಗಳ ಕೈಗೆ ಬಂದ ತುತ್ತು ಬಾಯಿಗೆ ಬಾರದೆ ತೊಂದರೆ ಪಡುತ್ತಿದ್ದಾರೆ. ಈ ಯೋಜನೆಯಲ್ಲಿ ತಾಲೂಕಿಗೆ 2011- 12ನೇ ಸಾಲಿಗೆ 652 ಮನೆ ನಿರ್ಮಾಣದ ಗುರಿ ಇತ್ತು. ಕೇವಲ 387 ಮನೆಗಳು ಪೂರ್ಣಗೊಂಡಿದ್ದು, 265 ಬೇರೆ ಬೇರೆ ಪ್ರಗತಿ ಹಂತದಲ್ಲಿದೆ. ಸಾಧನೆ ಶೇ. 52 ಮಾತ್ರ.
2012- 13ನೇ ಸಾಲಿನಲ್ಲಿ 295 ಮನೆ ನಿರ್ಮಾಣದ ಗುರಿಯಲ್ಲಿ 233 ಮನೆಗಳು ಪ್ರಗತಿ ಹಂತದಲ್ಲಿದೆ.
ಕೇವಲ 62 ಮನೆಗಳು ಮಾತ್ರ ಸಂಪೂರ್ಣಗೊಂಡಿದೆ. ಅಂದರೆ ಶೇ. 21ರಷ್ಟು ಗುರಿ ಸಾಧಿಸಲಾಗಿದೆ.
ಈ ಸಾಲಿನಲ್ಲಿ ಈ ಯೋಜನೆಯಡಿ 439 ಮನೆ ನಿರ್ಮಾಣದ ಗುರಿ ಇದೆ. ಫಲಾನುಭವಿಗಳ ಆಯ್ಕೆ ಪ್ರಕ್ರಿಯೆ ನಡೆಯುತ್ತಿದೆ ಎನ್ನುತ್ತಾರೆ ಅಧಿಕಾರಿಗಳು.
- ಚೈತ್ರಾ ಹೆರ್ಗ