ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಉಡುಪಿ

ನಿಡ್ಡೋಡಿ ಸ್ಥಾವರ ವಿರುದ್ಧ ಸಭೆ 20 ಪ್ರೇಕ್ಷಕರು, 60 ಪೊಲೀಸರು!

Lingaraj Badiger
Updated On : 25 Sept 2013, 11:23 am

ಉಡುಪಿ: ಸಾವಿರ ಮಂದಿ ಸುಖವಾಗಿ ಕುಳಿತುಕೊಳ್ಳುವ ಸಭಾಂಗಣ, ಅದರ ವೇದಿಕೆ ಮೇಲೆ ಬರೋಬ್ಬರಿ 15 ಮಂದಿ, ಇಬ್ಬರು ಧರ್ಮಗುರುಗಳು, ವೇದಿಕೆ ಕೆಳಗೆ 20 ಮಂದಿ ಪತ್ರಕರ್ತರು, 15- 20 ಮಂದಿ ಪ್ರೇಕ್ಷಕರು, ಸಭಾಂಗಣದ ಹೊರಗೆ 60 ಮಂದಿ ಪೊಲೀಸರು..
ಇದು, ಮುಂಬೈನಲ್ಲಿರುವ ಕರಾವಳಿಯ ಭಾರಿ ಉದ್ಯಮಿಗಳು ನಡೆಸುತ್ತಿರುವ ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿ  ಮಂಗಳವಾರ ದಕ ಜಿಲ್ಲೆಯ ನಿಡ್ಡೋಡಿಯಲ್ಲಿ ಸ್ಥಾಪಿಲು ಉದ್ದೇಶಿಸಿರುವ ಉಷ್ಣ ವಿದ್ಯುತ್ ಸ್ಥಾವರ ವಿರುದ್ಧ ಉಡುಪಿಯಲ್ಲಿ ಆಯೋಜಿಸಲಾಗಿದ್ದ ಬೃಹತ್ ಜನಜಾಗೃತಿ ಸಮಾವೇಶದ (ಅ)ವ್ಯವಸ್ಥೆ.
ಅಂದ ಹಾಗೆ, ಇದೇ ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿಯು ಉಡುಪಿಯ ಪಡುಬಿದ್ರಿ ಸಮೀಪದ ಎಲ್ಲೂರಿನಲ್ಲಿ ಸ್ಥಾಪನೆಯಾಗಿರುವ ಉಡುಪಿ ಪವರ್ ಕಾರ್ಪೊರೇಶನ್ ಲಿಮಿಟೆಡ್ ಎಂಬ ಉಷ್ಣ ವಿದ್ಯುತ್ ಸ್ಥಾವರಕ್ಕೆ ಸಂಪೂರ್ಣ ಬೆಂಬಲ ನೀಡಿತ್ತು.
ಹೋರಾಟಗಾರರ ಜತೆ ನಾನಿದ್ದೇನೆ: ಸಮಾವೇಶ ಉದ್ಘಾಟಿಸಿದ ಪೇಜಾವರ ಮಠದ ಶ್ರೀವಿಶ್ವೇಶ ತೀರ್ಥ ಸ್ವಾಮೀಜಿ, ನಿಡ್ಡೋಡಿ ಉಷ್ಣವಿದ್ಯುತ್ ಸ್ಥಾವರದ ವಿರುದ್ಧ ಅಲ್ಲಿನ ಜನರು ಸಂಘಟಿತರಾಗಿ ಹೋರಾಟ ನಡೆಸುವುದಿದ್ದರೆ ಅವರ ಜೊತೆಗೆ ನಾನಿದ್ದೇನೆ ಎಂದು ಭರವಸೆ ನೀಡಿದರು.
  ಬೃಹತ್ ಉದ್ಯಮ ಸ್ಥಾಪಿಸುವುದಕ್ಕೆ ಉಭಯ ಜಿಲ್ಲೆಗಳ ಭೂಧಾರಣಾ ಸಾಮರ್ಥ್ಯ ಪರೀಕ್ಷೆಯಾಗಿಲ್ಲ. ಅದಾಗದೆ ಈಗ ಅನೇಕ ಉದ್ಯಮಗಳು ಬರುತ್ತಿವೆ, ಉದ್ಯಮಗಳಿಗೆ ತಮ್ಮ ವಿರೋಧವಿಲ್ಲ. ಆದರೆ ಪರಿಸರ, ಕೃಷಿಗೆ ಹಾನಿಯಾಗದ ಪರಿಸರಪೂರಕ ಉದ್ಯಮಗಳಿಗೆ ಬೆಂಬಲ ಇದೆ ಎಂದರು.
ಮೂಡುಬಿದಿರೆ ಜೈನ ಮಠದ ಸ್ವಸ್ತಿಶ್ರೀ ಭಟ್ಟಾರಕ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಸ್ವಾಮೀಜಿ ಮಾತನಾಡಿ, ಅವಿಭಜಿತ ದ.ಕ. ಜಿಲ್ಲೆ ವೈವಿಧ್ಯಮಯ ಹವಾಗುಣ, ಧಾರ್ಮಿಕ ಕ್ಷೇತ್ರಗಳು, ಅಪೂರ್ವ ಪರಿಸರ ಸಂಪತ್ತನ್ನು ಹೊಂದಿದೆ. ಒಂದೆಡೆ ಇದನ್ನು ಸಂರಕ್ಷಿಸುವ ಯೋಜನೆಗಳನ್ನು ವಿರೋಧಿಸಲಾಗುತ್ತಿದೆ. ಇನ್ನೊಂದೆಡೆ ಸುಂದರ ಪ್ರಕೃತಿಯನ್ನು ನಾಶ ಮಾಡುವ ಉದ್ಯಮಗಳು ಬರುತ್ತಿವೆ ಎಂದು ಆತಂಕ ವ್ಯಕ್ತಪಡಿಸಿದರು.
ಜಯಶ್ರೀಕೃಷ್ಣ ಪರಿಸರಪ್ರೇಮಿ ಸಮಿತಿ ಗೌರವಾಧ್ಯಕ್ಷ ಡಾ.ಬಿ.ಎಂ. ಹೆಗ್ಡೆ ಅಧ್ಯಕ್ಷತೆ ವಹಿಸಿದ್ದರು.
ಸ್ಥಾಪಕಾಧ್ಯಕ್ಷ ತೋನ್ಸೆ ಜಯಕಷ್ಣ ಎ. ಶೆಟ್ಟಿ ಮಾತನಾಡಿದರು. ಸಮಿತಿಯ ದಕ ಜಿಲ್ಲಾಧ್ಯಕ್ಷ ಫೆಲಿಕ್ಸ್ ಡಿಸೋಜ, ಉದ್ಯಮಿಗಳಾದ ಬಿ.ಡಿ. ಶೆಟ್ಟಿ, ಸುರೇಶ್ ಶೆಟ್ಟಿ ಯೆಯ್ಯಾಡಿ, ಶೇಖರ್ ಗುಜ್ಜರಬೆಟ್ಟು ಮತ್ತಿತರರು ಇದ್ದರು. ಹರೀಶ್ ಕುಮಾರ್ ಎಂ. ಶೆಟ್ಟಿ ಸ್ವಾಗತಿಸಿದರು. ಜಗದೀಶ ಅಧಿಕಾರಿ ಪ್ರಾಸ್ತಾವಿಕವಾಗಿ ಮಾತನಾಡಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement